ಗೋಣಿಕೊಪ್ಪಲು, ಏ. 5: ಚನ್ನಯ್ಯನಕೋಟೆ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಡ ಕಾರ್ಮಿಕರಿಗೆ ವಿತರಿಸಬೇಕಾದ ಪಡಿತರ ವಸ್ತುಗಳ ವಿತರಣೆಯಲ್ಲಿ ತಾರತಮ್ಯ ವಾಗುವು ದನ್ನು ಮನಗಂಡ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ನಂದೀಶ್ ಕುಮಾರ್ ಭಾನುವಾರ ಮುಂಜಾನೆ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ವಿತರಣೆಯಲ್ಲಿನ ತಾರತಮ್ಯ ನಿವಾರಿಸಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.ಅಂತ್ಯೋದಯ ಕಾರ್ಡಿಗೆ ತಲಾ 35 ಕೆ.ಜಿ.ಯಂತೆ ಎರಡು ತಿಂಗಳಿಗೆ 70 ಕೆ.ಜಿ.ಪಡಿತರ ಅಕ್ಕಿಯನ್ನು ನೀಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಆದೇಶವನ್ನು ಗಾಳಿಗೆ ತೂರಿದ ಅಂಗಡಿ ಮಾಲೀಕರು ಕೇವಲ 54 ಕೆ.ಜಿ. ವಿತರಣೆ ಮಾಡುತಿದ್ದರು. ಈ ಬಗ್ಗೆ ಸ್ಥಳಿಯ ಗಿರಿಜನ ಮುಖಂಡರಾದ ಸಿದ್ದಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅಂಗಡಿ ಮಾಲೀಕರು ಸ್ಪಂದಿಸಿರಲಿಲ್ಲ.ನ್ಯಾಯ ಬೆಲೆ ಅಂಗಡಿಯಲ್ಲಿ ಬಡ ಕಾರ್ಮಿಕರಿಗೆ ಅನ್ಯಾಯ ವಾಗುತ್ತಿರುವ ಬಗ್ಗೆ ತಾಲೂಕು ತಹಶೀಲ್ದಾರ್ ನಂದೀಶ್ ಕುಮಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಸ್ಪಂದಿಸಿದ ತಹಶೀಲ್ದಾರ್ ನಂದೀಶ್ ಕುಮಾರ್, ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಷಣ್ಮುಖ ಅವರೊಂದಿಗೆ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಪಡಿತರ ವಸ್ತುಗಳನ್ನು ಮೊಬೈಲ್ ಒಟಿಪಿ ಮೂಲಕ ವಿತರಿಸಬೇಕು

(ಮೊದಲ ಪುಟದಿಂದ) ಎಂದು ನಿಯಮವಿದ್ದರೂ ಇದನ್ನು ಪಾಲಿಸದೇ ಹಳೆಯ ಮಾದರಿಯಲ್ಲಿಯೇ ಪಡಿತರ ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಡಿತರ ವಿತರಣೆ ನಡೆಯುತ್ತಿತ್ತು.

ತಕ್ಷಣವೇ ಈ ಪದ್ಧತಿಯನ್ನು ನಿಲ್ಲಿಸುವಂತೆ ತಹಶೀಲ್ದಾರ್ ಸೂಚನೆ ನೀಡಿ ಗ್ರಾಹಕರ ಮೊಬೈಲ್ ಒಟಿಪಿ ಆಧಾರದಲ್ಲಿ ಪಡಿತರ ನೀಡಲು ಸೂಚನೆ ನೀಡಿದರು.

ಅಲ್ಲದೆ ಅಂತ್ಯೋದಯ ಕಾರ್ಡಿಗೆ ಕಡಿಮೆ ಅಕ್ಕಿ ಪಡೆದ ಕಾರ್ಮಿಕರನ್ನು ವಾಪಾಸು ಕರೆಸಿ ನಿಯಮದಂತೆ ಎರಡು ತಿಂಗಳ 70 ಕೆಜಿ ಅಕ್ಕಿ ವಿತರಿಸಿದರು.

ಅಂತಿಮ ಎಚ್ಚರಿಕೆ ನೀಡಿದ ತಹಶೀಲ್ದಾರ್ ನಂದೀಶ್ ಕುಮಾರ್ ಇನ್ನು ಮುಂದೆ ಸರಕಾರದ ನಿಯಮದಂತೆ ಪಡಿತರ ವಸ್ತುಗಳನ್ನು ನೀಡಬೇಕು. ಮುಂಜಾನೆ 7 ಗಂಟೆಯಿಂದಲೇ ಕೆಲಸ ನಿರ್ವಹಿಸುವಂತೆ, ಟೋಕನ್ ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಿದರು. ಈ ಸಂದರ್ಭ ಹಾಡಿಯ ಪ್ರಮುಖ ಗಿರಿಜನ ಮುಖಂಡರಾದ ಶಾಂತಕುಮಾರ್, ಅಶೋಕ, ಅಪ್ಪಣ್ಣ, ಮುತ್ತ, ಸೋಮ, ರಾಜು, ಅರುಣ್, ನೀಲಾ, ಪಿಡಿಒ ರಾಜನ್ ಮುಂತಾದವರು ಹಾಜರಿದ್ದರು.

- ಹೆಚ್.ಕೆ. ಜಗದೀಶ್