ಮಡಿಕೇರಿ, ಏ. 5: ಕತ್ತಲೆಯ ನಡುವೆ ಎಲ್ಲರ ಬದುಕಿಗೆ ಆಶಾಕಿರಣವಾಗುವುದು ಬೆಳಕು ಎಂಬ ಶಕ್ತಿ... ಪ್ರಸ್ತುತ ವಿಶ್ವವ್ಯಾಪಿಯಾಗಿ ಕೊರೊನಾ ಎಂಬ ಮಹಾ ವೈರಸ್ ಜನರ ಬದುಕಿನ ಹಾದಿಯಲ್ಲಿ ಅಂಧಕಾರವನ್ನು ಸೃಷ್ಟಿಸಿದೆ. ಇನ್ನೂ ಔಷಧಿ ಇಲ್ಲದ ಈ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಇದರ ಪ್ರಯತ್ನವೆಂಬಂತೆ ಭಾರತದಲ್ಲಿ ಇಂದು ವಿಶಿಷ್ಟ ರೀತಿಯ ಪ್ರಯೋಗವೊಂದು ನಡೆದಿದೆ. ವಿದ್ಯುತ್ ರಹಿತವಾಗಿ ಬೆಳಕಿನ ಪ್ರಖರತೆಯ ಪ್ರಕಾಶಮಾನದ ಮೂಲಕ ಭಾರತ ಪ್ರಜ್ವಲಿಸಿತು. ದೀಪಗಳ ಬೆಳಗುವಿಕೆ, ಪ್ರಾರ್ಥನೆ, ಹಾಡುಗಳ ಮೂಲಕ ಪ್ರಧಾನಿ ಕರೆಗೆ ಬೆಂಬಲ ವ್ಯಕ್ತಗೊಂಡಿತು.ಅಖಂಡ ಭಾರತದಲ್ಲಿ ಈ ಶತಮಾನದಲ್ಲಿ ನೆಲೆಸಿರುವ ಜನತೆಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಭಯಮಿಶ್ರಿತವಾದರೂ ಅದೇನೋ ಒಂದು ಚೈತನ್ಯa ಮೂಡಿಸುವ ಅನುಭವ... ಇಡೀ ವಿಶ್ವ ಕೊರೊನಾ ಎಂಬ(ಮೊದಲ ಪುಟದಿಂದ) ಮಹಾಮಾರಿಯಿಂದ ತಲ್ಲಣಗೊಳ್ಳುತ್ತಿದ್ದರೆ... ಇತ್ತ ಶತಕೋಟಿಗೂ ಮಿಗಿಲಾದ ಭಾರತದಲ್ಲಿರುವ ಭಾರತೀಯರು... ವಿಶ್ವದ ಇತರೆಡೆಗಳಲ್ಲಿ ನೆಲೆಸಿರುವ ಭಾರತದ ಪ್ರಜೆಗಳಲ್ಲಿ ತಲೆದೋರಿರುವ ಭಯಾನಕತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸದ ಚೇತೋಹಾರಿಕೆಯ, ಪರಿಕಲ್ಪನೆಯ ಮತ್ತೊಂದು ಮಜಲು ಎಂಬಂತೆ ಇಂದು (ಏ. 5) ರಾತ್ರಿ 9 ಗಂಟೆಯಿಂದ ಒಂಬತ್ತು ನಿಮಿಷ ದೇಶ ಬೆಳಕಿನೊಂದಿಗೆ ಪ್ರಜ್ವಲಿಸಿದೆ...

ಹೆಮ್ಮಾರಿಯಂತಾಗುತ್ತಿರುವ ಕೊರೊನಾ ಎಂಬ ವೈರಸ್ ಅನ್ನು ಪ್ರಸ್ತುತ ಔಷಧಿ ಎಂಬದು ಇಲ್ಲವಾದರೂ ಮೆಟ್ಟಿ ನಿಂತು ಜನತೆಯನ್ನು ಉಳಿಸುವ ಪರಿಕಲ್ಪನೆಗೆ ಇಡೀ ದೇಶವ್ಯಾಪಿಯಾಗಿ ಬೆಳಕಿನ ಹೋರಾಟ ನಡೆದಿದೆ. ದೇಶದ ಸರ್ವಧರ್ಮೀಯರು ಕೈಜೋಡಿಸುವುದರೊಂದಿಗೆ ದೇಶ ದೀಪದ ಬೆಳಕು, ಕ್ಯಾಂಡಲ್ ಬೆಳಕಿನ ಹೊಳಪು, ಪ್ರಾರ್ಥನೆಯ ಮೂಲಕ ಮರೆಯಲಾಗದ ದಿನದಂತಾಗಿ ಏ. 5ರ ಭಾನುವಾರ ರಾತ್ರಿ 9ರ ವೇಳೆಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತೊಂದು ಸಮರ ಸಾರಿತು.

ವಿದ್ಯುತ್‍ನಂತಹ ಬೆಳಕನ್ನು ಆರಿಸಿ, ದೀಪ, ಹಣತೆ, ಕ್ಯಾಂಡಲ್, ಮೊಬೈಲ್ ಲೈಟ್, ಟಾರ್ಚ್ ಲೈಟ್‍ನ ನಂಬಿಕೆಯ ದೀವಿಗೆಯ ಮಾದರಿಯಲ್ಲಿ ಜನತೆ ರಣಕಹಳೆ ಮೊಳಗಿಸಿದರು. ಕೊರೊನಾ ಎಂಬ ಅಂಧಕಾರದಿಂದ ಪ್ರಕಾಶತೆಯ ಕಡೆಗೆ ಸಶಕ್ತ ಹೆಜ್ಜೆಯಿಡಲು ಪ್ರಧಾನಿ ಮೋದಿ ಅವರ ಕರೆಗೆ ಜನತೆ ತಮ್ಮ ತಮ್ಮ ಹೃದಯಾನುಸಾರ ಶಕ್ತ್ಯಾನುಸಾರ ಬೆಂಬಲ ನೀಡಿದರು.

ರಾತ್ರಿ 9ರ ಸಮಯವಾಗುತ್ತಿದ್ದಂತೆ ಇದಕ್ಕಾಗಿ ಸಿದ್ಧರಾಗಿ ಕಾದು ನಿಂತಿದ್ದ ಜನತೆ ವಿದ್ಯುತ್ ದೀಪಗಳನ್ನು ಆರಿಸಿ ದೀಪ, ಹಣತೆಗಳನ್ನು ಬೆಳಗಿದರು. ಹಿಂದೂ ಧರ್ಮೀಯರು ದೀಪ-ಹಣತೆಯನ್ನು ಪ್ರಜ್ವಲಿಸಿದರೆ, ಕ್ರೈಸ್ತ ಧರ್ಮೀಯರು ಕ್ಯಾಂಡಲ್ ಬೆಳಗಿಸಿದರು. ಮುಸಲ್ಮಾನರು ಈ ಸಮಯದಲ್ಲಿ ಅಲ್ಲಾಹುವಿನ ಪ್ರಾರ್ಥನೆಗೈದರು... ಇವೆಲ್ಲವೂ ‘ಲಾಕ್‍ಡೌನ್’ ಆಗಿರುವ ಪರಿಸ್ಥಿತಿಯ ನಡುವೆ ಅವರವರ ಮನೆ-ಮನಗಳಲ್ಲಿ ನಡೆಯಿತು. ಹಿರಿಯರು, ಪುರುಷರು, ಮಹಿಳೆಯರು, ಮಕ್ಕಳು ಹೊಸ ಚೈತನ್ಯ ಪಡೆದು ಈ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗಿಗಳಾದರು... ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ಸಾಹಿತರು ಆಗಸ ದೀಪ ಹಾರಿಸುವುದರ ಮೂಲಕ ಒಗ್ಗಟ್ಟು ಪ್ರದರ್ಶಿಸಿದರೆ ಇನ್ನಷ್ಟು ಹಲವು ಮಂದಿ ಪಟಾಕಿ ಸಿಡಿಸಿ ಈ ಆಂದೋಲನದಲ್ಲಿ ಪಾಲ್ಗೊಂಡರು.

ಸಾಮೂಹಿಕ ಶಕ್ತಿಯ ಸಾಮಥ್ರ್ಯದಿಂದ ಎದುರಾಗಿರುವ ದುರಂತವನ್ನು ತೊಡೆದು ಹಾಕುವ ಪ್ರಯತ್ನವಾಗಿ ದೇಶ ಈ ರೀತಿಯಾಗಿ ಬೆಳಕನ್ನು ಕಂಡಿತು. ವಿದೇಶಗಳಲ್ಲಿನ ಭಾರತೀಯರಿಂದಲೂ ಸ್ಪಂದನೆ ಕಂಡು ಬಂದಿತು.

ಕೊರೊನಾದಿಂದ ರಕ್ಷಣೆಗಾಗಿ ದೇಶದಲ್ಲಿ ಹತ್ತು ಹಲವಾರು ಪ್ರಯತ್ನಗಳು ನಡೆಯು ತ್ತಿವೆ. ಸುಮಾರು 130 ಕೋಟಿ ಜನಸಂಖ್ಯೆ ಯಿರುವ ಭಾರತದಲ್ಲಿ ಈ ನಿಟ್ಟಿನಲ್ಲಿ ನಡೆಯು ತ್ತಿರುವ ಸಮ ರೋಪಾದಿಯ ಪ್ರಯತ್ನಕ್ಕೆ ಕೆಲವೊಂದು ಅಡೆ-ತಡೆಗಳು ಎದುರಾಗುತ್ತಿರುವುದು ವಿಷಾದಕರವಾದರೂ... ಪ್ರಧಾನಿಯ ಕರೆಗೆ ಹೆಚ್ಚು ಪ್ರಾಶಸ್ತ್ಯ ದೊರೆತಂತಾಗಿದೆ.

ಇಡೀ ದೇಶದಲ್ಲಿ ಸುಮಾರು 21 ದಿನಗಳ ಕಾಲ ‘ಲಾಕ್‍ಡೌನ್’ ಘೋಷಣೆಯಾಗಿ ಇಂದಿಗೆ 12 ದಿನಗಳಾಗಿವೆ. ಕೆಲವೊಂದು ಸಾವು-ನೋವುಗಳು ಸಂಭವಿಸುತ್ತಿದ್ದರೂ ರಕ್ಷಣಾ ಪಡೆಗಳು, ಪೊಲೀಸ್, ಎಲ್ಲಾ ರಾಜ್ಯ ಸರಕಾರಗಳು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಹೋರಾಟ ಮುಂದುವರಿಯುತ್ತಿವೆ.

ಮಾರ್ಚ್ 22ರ ಭಾನುವಾರದಂದು ಪ್ರಧಾನಿ ಮೋದಿಯವರು ದೇಶವ್ಯಾಪಿಯಾಗಿ ಜನತಾ ಕಫ್ರ್ಯೂ ಘೋಷಿಸಿದ್ದಕ್ಕೂ ಅಪಾರ ಜನಬೆಂಬಲ ವ್ಯಕ್ತಗೊಂಡಿತ್ತು. ಆ ದಿನದಂದು ಬೆ. 7 ರಿಂದ ರಾತ್ರಿ 9ರ ತನಕ ಜನತಾ ಕಫ್ರ್ಯೂಗೆ ಕರೆ ನೀಡಲಾಗಿತ್ತು. ಇದರ ನಡುವೆ ಅದೇ ದಿನದಂದು ಸಂಜೆ 5 ಗಂಟೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ನಿಂತು ಘಂಟೆ-ಜಾಗಟೆ, ಶಂಕನಾದದೊಂದಿಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಹಗಲು-ಇರುಳೆನ್ನದೆ ದುಡಿಯುತ್ತಿರುವವರಿಗಾಗಿ ಗೌರವ ನಮನದೊಂದಿಗೆ ಮತ್ತಷ್ಟು ಆತ್ಮವಿಶ್ವಾಸದ ಹುಮ್ಮಸ್ಸು ತುಂಬಲು ನೀಡಿದ್ದ ಮನವಿಗೆ ಜನತೆ ತುಂಬು ಹೃದಯದಿಂದಲೇ ಓಗೊಟ್ಟಿದ್ದರು. ಇದೀಗ ದೇಶ ಪ್ರಸ್ತುತ ‘ಲಾಕ್‍ಡೌನ್’ನಲ್ಲಿದ್ದರೂ ಮತ್ತೊಂದು ಪ್ರಯೋಗಾತ್ಮಕ ಹೋರಾಟದಂತಾಗಿದ್ದು ಯಶಸ್ಸು ಕಂಡಿದೆ.