ಮಡಿಕೇರಿ, ಏ. 6: ನಾಡಿನ ಜನತೆಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ; ಹಗಲಿರುಳು ಸಾರ್ವಜನಿಕರ ಸೇವೆಗೆ ಮುಡಿಪಾ ಗಿರುವ, ಕಾನೂನು ಸುವ್ಯವಸ್ಥೆ ಸಂರಕ್ಷಣೆಯ ಹೊಣೆ ನಿಭಾಯಿಸುವ ನಮ್ಮೆಲ್ಲರ ರಕ್ಷಕರಾದ ಆರಕ್ಷಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವದು ಪ್ರಸ್ತುತ ದಿನದಲ್ಲಿ ಅತ್ಯವಶ್ಯವಾಗಿದೆ. ಮಹಾಮಾರಿ ಕೊರೊನಾ ವೈರಸ್ ಕಾಲಿಟ್ಟಲ್ಲಿಂದ ನಿದ್ದೆ, ತಮ್ಮ ಜೀವ, ಆರೋಗ್ಯವನ್ನು ಬದಿಗಿಟ್ಟು ಜನತೆಯ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ; ಅವರುಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಇಲ್ಲಿನ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಪೊಲೀಸರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಕೊರೊನಾ ವೈರಸ್ ಪತ್ತೆಯಾದ ಬಳಿಕ ಹಗಲಿರುಳು, ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಆರಕ್ಷಕರ ಆರೋಗ್ಯ ರಕ್ಷಣೆಗಾಗಿ ಈ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಶೀತ, ಜ್ವರ, ಕೆಮ್ಮು, ರಕ್ತದೊತ್ತಡ ಸೇರಿದಂತೆ ಇನ್ನಿತರ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ನುರಿತ ವೈದ್ಯರ ತಂಡ ತಪಾಸಣೆ ನಡೆಸುತ್ತಿದ್ದಾರೆ.

ಇಂದು ಮಧ್ಯಾಹ್ನ ಶಿಬಿರ ಆರಂಭಗೊಂಡ ಸಂದರ್ಭ ಪೊಲೀಸ್ ಉನ್ನತಾಧಿಕಾರಿ ಡಾ. ಸುಮನ್ ಡಿ.ಪಿ. ಸ್ಥಳಕ್ಕಾಗಮಿಸಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಡಿವೈಎಸ್‍ಪಿ ದಿನೇಶ್‍ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಸದಾಶಿವಯ್ಯ ಸೇರಿದಂತೆ ಅಧಿಕಾರಿಗಳು ಶಿಬಿರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಿಬಿರ ತಾ. 7 ರಂದೂ (ಇಂದು) ಕೂಡ ಮುಂದುವರಿಯಲಿದೆ.