ಮಹಾಭಾರತ ಯುದ್ಧದಲ್ಲಿ ತನ್ನ ತಂದೆ ದ್ರೋಣಾಚಾರ್ಯ ಕೊಲ್ಲಲ್ಪಟ್ಟಾಗ ಮಗ ಅಶ್ವತ್ಥಾಮನಿಗೆ ಎಲ್ಲಿಲ್ಲದ ದುಃಖ, ಕ್ರೋಧ ಉಂಟಾಗಿತ್ತು. ಆ ಕೋಪದಲ್ಲಿ ಪಾಂಡವರನ್ನು ಸಂಹರಿಸಲು ಅತಿ ಭಯಂಕರವಾದ, ಧ್ವಂಸಕಾರಿ ನಾರಾಯಣ ಅಸ್ತ್ರವನ್ನು ಪಾಂಡವರ ಸೈನ್ಯದ ಮೇಲೆ ಪ್ರಯೋಗಿಸಿದ. ಅದನ್ನು ನಿಷ್ಕ್ರಿಯಗೊಳಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಕೈಯ್ಯಲ್ಲಿ ಅಸ್ತ್ರ, ಆಯುಧಗಳನ್ನು ಹಿಡಿದಿರುವ ಮತ್ತು ದಾಳಿ ಮಾಡಲು ಪ್ರಯತ್ನಿಸುವವರನ್ನು ತಕ್ಷಣವೆ ಸುಟ್ಚು ಸಂಹಾರ ಮಾಡಲು ಆ ಅಸ್ತ್ರವನ್ನು ಬಳಸಲಾಗುತ್ತಿತ್ತು.
ಆಗ ಅಂತರ್ಯಾಮಿ ಭಗವಾನ್ ಶ್ರೀ ಕೃಷ್ಣ, ಪಾಂಡವ ಸೈನ್ಯಕ್ಕೆ ಯಾವುದೇ ಆಯುಧಗಳನ್ನು ಕೈಗೆತ್ತಿಕೊಳ್ಳದೆ ಶಾಂತ ರೀತಿಯಿಂದ ನೆಲದಲ್ಲಿ ನಮಸ್ಕರಿಸಿ ಶರಣಾಗುವಂತೆ ಆದೇಶಿಸಿದ ನಲ್ಲದೆ, ಯುದ್ಧ ಮಾಡುವ ಯೋಚನೆಯನ್ನು ಮನಸ್ಸಿನಲ್ಲಿ ತಂದುಕೊಂಡರೂ ಕೂಡ ಅವರು ಸರ್ವನಾಶವಾಗಬಲ್ಲರು ಎಂದು ಎಚ್ಚರಿಕೆ ನೀಡಿದ. ಎಲ್ಲರೂ ನೆಲದಲ್ಲಿ ತಲೆ ಬಾಗಿದರು.
ಅದರ ಸಮಯ ಸಮಾಪ್ತಿಯಾಗುತ್ತಲೆ ನಾರಾಯಣ ಅಸ್ತ್ರ ನಿಧಾನವಾಗಿ ತನ್ನ ಬಲವನ್ನು ಕಳೆದುಕೊಂಡು ತನ್ನಿಂದ ತಾನೆ ನಿಷ್ಕ್ರಿಯಗೊಂಡಿತು. ಈ ರೀತಿ ಪಾಂಡವರ ಸೈನ್ಯ ರಕ್ಷಿಸಲ್ಪಟ್ಟಿತು.
ಹಾಗಾದರೆ ಮಹಾಭಾರತದ ಈ ಅಧ್ಯಾಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವೆ ? ಎಲ್ಲ ಕಡೆಯಲ್ಲೂ ಎಲ್ಲ ಸಮಯದಲ್ಲೂ ಯುದ್ಧವೊಂದೇ ಸಮಸ್ಯೆಗೆ ಪರಿಹಾರವಲ್ಲ. ಪ್ರಕೃತಿಯ ರೋಷಾವೇಷವನ್ನು ಶಾಂತಗೊಳಿಸಬೇಕೆಂದರೆ, ಕೆಲವು ಸಲ ನಾವೆಲ್ಲ ಸಂಯಮದಿಂದ ವರ್ತಿಸಬೇಕಾಗುತ್ತದೆ. ನಮ್ಮ ಎಲ್ಲಾ ಕೆಲಸ ಕಾರ್ಯ, ವಿಚಾರಗಳನ್ನು ಕಟ್ಟಿ ಹಾಕಿ ಶಾಂತ ಚಿತ್ತರಾಗಿ ನಿಂತಲ್ಲೇ ನಿಲ್ಲಬೇಕಾಗುತ್ತದೆ. ಆಗ ಮಾತ್ರ ಅನಾಹುತಗಳನ್ನು ತಡೆಯಲು, ಅದರಿಂದ ಬದುಕುಳಿಯುವುದು ಸಾಧ್ಯ.
ಅದೇ ರೀತಿ ಕೊರೊನಾ ಕೂಡ ತನ್ನ ಅವಧಿ ಮುಗಿದ ನಂತರ ತಾನಾಗಿಯೇ ನಿಷ್ಕ್ರಿಯಗೊಳ್ಳುತ್ತದೆ. ಎಲ್ಲರಲ್ಲಿ ತಾಳ್ಮೆ ಸಂಯಮವಿರಲಿ.