ಕಣಿವೆ, ಏ. 4: ಯಾವ ರಾಶಿ ಭವಿಷ್ಯವೂ, ಯಾವ ಜ್ಯೋಷಿಯೂ ನಿರೀಕ್ಷಿಸದ ಸಾಂಕ್ರಾಮಿಕ ಕ್ರಿಮಿ ಕೊರೊನಾ ಹೆಸರಲ್ಲಿ ಇಡೀ ವಿಶ್ವದಲ್ಲೇ ಅಟ್ಟಹಾಸ ಮೆರೆಯುತ್ತಿರುವ ಈ ಹೊತ್ತಿನಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಕರೆಕೊಟ್ಟ ಹಣತೆ ಹಚ್ಚಬೇಕೆಂಬ ಸಂದೇಶ ಕ್ರಿಮಿಯ ವಿರುದ್ಧ ಬೆಳಕಿನ ವಿರುದ್ಧವಲ್ಲದೇ ಬೇರೇನು ಅಲ್ಲ.

ಇಡೀ ದೇಶವಾಸಿಗಳು ಕಳೆದ ಹಲವು ದಿನಗಳಿಂದ ಹಗಲನ್ನು ಕತ್ತಲೆಯಂತೆ ಭಯ, ಆತಂಕ, ಮುಂದೇನೋ, ಮತ್ತಿನ್ನೇನೋ, ಎಂಬ ಕರಿಛಾಯೆಯಲ್ಲಿ ದಿನ ಕಳೆಯುತ್ತಿರುವ ಸಂದರ್ಭದಲ್ಲಿ ಮೋದಿಯವರು ಅಳೆದು -ತೂಗಿ, ಯೋಚಿಸಿ - ಚಿಂತಿಸಿ, ದೇಶದ ಜನಮಾನಸದಲ್ಲಿ ಕವಿದಿರುವ ಆತಂಕದ ಅಂಧಕಾರವನ್ನು ಒಂದಷ್ಟು ದೂರ ಮಾಡಿ ಅವರಲ್ಲಿ ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ದೇಶವಾಸಿಗಳೆಲ್ಲಾ ತಮ್ಮ ಮನೆಯಂಗಳದಲ್ಲಿ ದೀಪ, ಕ್ಯಾಂಡಲ್, ಟಾರ್ಚ್ ಹಚ್ಚಿ ಭಾರತಾಂಬೆಯನ್ನು ಸ್ಮರಿಸಿ ಎಂಬ ಸಂದೇಶವನ್ನು ಸಂಯಮದಿಂದ ಪಾಲಿಸಬೇಕಲ್ಲದೇ ಯಾರೂ ಕೂಡ ಸಂದೇಹಪಡಬಾರದು.

ಏಕೆಂದರೆ, ಮಹಾಮಾರಿ ಮಾರಕ ವೈರಸ್ ವಿರುದ್ಧ ಇಡೀ ದೇಶ ವಾಸಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿದರಷ್ಟೆ ಅದನ್ನು ಮಣಿಸಲು ಸಾಧ್ಯವಾದೀತು ಎಂಬುದು ಪ್ರಧಾನಿ ಗಳ ಆಶಯ. ಐದನೇ ತಾರೀಖು, ನಾಲ್ಕನೇ ತಿಂಗಳು, ರಾತ್ರಿ ಒಂಭತ್ತು ಗಂಟೆಯಲ್ಲಿ ಒಂಭತ್ತು ನಿಮಿಷ ಮನೆಯಂಗಳಗಳಲ್ಲಿ ಸಾಮೂಹಿಕ ವಾಗಿ ಹಣತೆ, ಕ್ಯಾಂಡಲ್, ಟಾರ್ಚ್ ಹಚ್ಚಿ ದೇಶವಾಸಿಗಳಿಗೆ ಕಾಡುತ್ತಿರುವ ದುಷ್ಟ ಶಕ್ತಿಯನ್ನು ನಿಗ್ರಹಿಸು ಎಂದು ಭಾರತ ಮಾತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ ಪ್ರತಿಯೊಬ್ಬರ ಮನಸಿನಲ್ಲಿ ಮತ್ತು ಮನೆಯಲ್ಲಿ ಅಗೋಚರ ಶಕ್ತಿ ಒಡ ಮೂಡುತ್ತದೆ. ಆತ್ಮ ಸ್ಥೈರ್ಯ ಗಟ್ಟಿಯಾಗುತ್ತದೆ. ಜನವಲಯದಲ್ಲಿ ಮನೆಮಾಡಿರುವ ಕೊರೊನಾ ಏನೋ ಮಾಡಿಬಿಡುತ್ತದೆ ಎಂಬ ಅಜ್ಞಾನ ದೂರವಾಗುತ್ತದೆ.

ಪ್ರತಿಯೊಬ್ಬರ ಮನಸಲ್ಲಿ ಕ್ರಿಮಿ ಕೊರೊನಾ ಮೂಡಿಸಿರುವ ಅಂಧಕಾರ ದೂರಮಾಡುತ್ತದೆ. ಕಳೆದ ಹಲವು ದಿನಗಳಿಂದಲೂ ಮನೆ ಮಂದಿಯನ್ನೆಲ್ಲಾ ಮನೆಯೊಳಗೆ ಬಂಧಿಯಾಗಿಸಿದ ಲಾಕ್‍ಡೌನ್‍ನಿಂದ ಮನಸ್ಸಿನ ಮೇಲೆ ಆಗಿರುವ ಬೇಸರ ದೂರ ಮಾಡುತ್ತದೆ. ನಂಬಿಕೆಯ ಮೇಲೆಯೇ ಇಡೀ ಜಗತ್ತು ನಿಂತಿರುವುದರಿಂದ ಹೀಗೆ ಹಣತೆ, ಕ್ಯಾಂಡಲ್, ಟಾರ್ಚ್ ಹಚ್ಚಿ ಸಾಮೂಹಿಕವಾಗಿ ಪ್ರಾರ್ಥಿಸಿ ಎಂಬ ಪ್ರಧಾನಿಗಳ ಕರೆಯನ್ನು ಯಾರೂ ಕೂಡ ಓರೆ - ಕೋರೆಗಳಿಗೆ ಹಚ್ಚಿ ಟೀಕೆ -ಟಿಪ್ಪಣಿ ಅಥವಾ ರಾಜ ಕಾರಣ ಮಾಡದಿದ್ದರೆ ಸಾಕು. ದೇವರ ಮೇಲಿನ ನಂಬಿಕೆ ಅವರವರ ವೈಯಕ್ತಿಕ ನೆಲೆಗಟ್ಟಿನ ಮೇಲೆ ನಿಂತಿರುತ್ತದೆ. ಆದರೆ ಈ ಮಾರಕ ಕೊರೊನಾ ಸೃಷ್ಟಿಸಿರುವ ಭಯ, ವ್ಯಾಕುಲತೆ, ಆತಂಕವನ್ನು ಮೆಟ್ಟಿ ನಿಂತು ತಾಯಿ ಭಾರತಾಂಬೆಯ ಸ್ಮರಣೆಯಿಂದ ಈ ಯುದ್ಧವನ್ನು ಗೆದ್ದೇ ತೀರುತ್ತೇವೆಂಬ ಸಂಕಲ್ಪವನ್ನು ಎಲ್ಲರೂ ತೊಟ್ಟು ಕೊರೊನಾದ ಕತ್ತಲೆಯಿಂದ ನಾವೆಲ್ಲ್ಲ ಬೆಳಕಿಗೆ ಬರಬೇಕಿದೆ.

-ಮೂರ್ತಿ