ಮಡಿಕೇರಿ, ಏ. 4: ಕೊರೊನಾ ಸೋಂಕು ತಡೆಗಟ್ಟುವ ಕ್ರಮಗಳ ಸಂದರ್ಭ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯರ ಹಾಗೂ ಕೆಪಿಸಿಸಿಯ ಕೊರೊನಾ ಸೋಂಕು ತಡೆಯ ಟಾಸ್ಕ್ ಫೋರ್ಸ್‍ನ ಕೊಡಗು ಜಿಲ್ಲಾ ಉಸ್ತುವಾರಿ ಆರ್. ಧರ್ಮಸೇನ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನ ನಿಯಂತ್ರಣದ ಸರ್ಕಾರದ ಕ್ರಮಗಳಿಗೆ ನಮ್ಮ ಪೂರ್ಣ ಸಹಕಾರವಿದೆ. ಈ ಹಂತದಲ್ಲಿ ಸರ್ಕಾರ ಕೇವಲ ಕೊರೊನಾ ಒಂದನ್ನೇ ಕೇಂದ್ರೀಕರಿಸದೆ ಜನರ ಸಂಕಷ್ಟಗಳಿಗೂ ಸ್ಪಂದಿಸುವ ಅಗತ್ಯವಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾರ್ಗದರ್ಶನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೊರೊನಾ ಸೋಂಕು ತಡೆಯ ಟಾಸ್ಕ್ ಫೋರ್ಸ್ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಧರ್ಮಸೇನ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮಾತನಾಡಿ, ಕೊಡಗಿನ 6 ಬ್ಲಾಕ್ ಕಾಂಗ್ರೆಸ್ ವಿಭಾಗಗಳಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ‘ಸಹಾಯ ವಾಣಿ’ ಆರಂಭಿಸಿ, ದೂರವಾಣಿ ಸಂಖ್ಯೆಗಳನ್ನು ಒದಗಿಸಲಾಗಿದೆ. ಆ ಮೂಲಕ ಕೊರೊನಾ ಸಾಂಕ್ರಾಮಿಕ ಸಂಕಷ್ಟದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಅಗತ್ಯ ನೆರವನ್ನು ನೀಡುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಹಾಗೂ ಜಿಲ್ಲಾ ಖಜಾಂಚಿ ಹೆಚ್.ಎಂ. ನಂದಕುಮಾರ್ ಉಪಸ್ಥಿತರಿದ್ದರು.