ಮಡಿಕೇರಿ, ಏ. 4: 75ರ ಈ ತರುಣ ನಿನ್ನೆ ‘ಶಕ್ತಿ’ ಕಚೇರಿಗೆ ಬಂದಿ ದ್ದರು. ಬಾಗಿಲಲ್ಲೇ ಚಪ್ಪಲಿ ಬಿಚ್ಚಿ, ತಂದಿದ್ದ ಕಪ್ಪು ಕೊಡೆಯನ್ನು ಮೂಲೆಯಲ್ಲಿ ಒರಗಿಸಿ ಬಾಗಿಲು ತೆಗೆದು ಒಳಗೆ ಬರಲೇ ಎಂದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿನಂತಿಸಿ ಒಳ ಕರೆದೆ.ನಿನ್ನೆ ದಿನ ಯಡಿಯೂರಪ್ಪ ಅವರು ತನ್ನ ವರ್ಷದ ಸಂಬಳ 24 ಲಕ್ಷವನ್ನು ಕೋವಿಡ್ 19 ಪರಿಹಾರ ನಿಧಿಗೆ ನೀಡಿದ್ದನ್ನು ನೋಡಿದೆ ಎಂದರು. ನಂತರ ಪತಿ-ಪತ್ನಿ ಚರ್ಚಿಸಿ ಒಂದು ಲಕ್ಷ ರೂಪಾಯಿ ನೀಡಬೇಕೆಂದು ತೀರ್ಮಾನಿಸಿ ಚೆಕ್ ತಂದಿರುವುದಾಗಿ ಧನ್ಯತಾ ಭಾವದ ಮಾತುಗಳನ್ನಾಡಿದರು.ಜಿಲ್ಲೆಯ ಒಳಿತಿಗಾಗಿ ಶ್ರಮಿಸುತ್ತಿರುವ ಜಿಲ್ಲಾಡಳಿತ ಮೂಲಕ ಕಳುಹಿಸೋಣ ಎಂದು ಮನವೊಲಿಸಿ ಡಿಸಿಯವರ ಸಮಯ ನಿಗದಿಪಡಿಸಿದೆ.ಇಂದು 9.30ಕ್ಕೆ ನನ್ನ ಕಚೇರಿಗೆ ಬಂದ ಈ ಹಿರಿಯ ಪ್ರಾಯದ ಪಿ.ಎಂ. ಸುಬ್ಬಮ್ಮಯ್ಯ ‘ಈ ದೇಶದ ಒಳಿತಿಗಾಗಿ ನನ್ನ ಪುಟ್ಟ ಕಾಣಿಕೆ ಇದು’ ಎಂದು ಖಾಲಿ ಚೆಕ್ ನೀಡಿದರು. 37 ವರ್ಷ ಕಾಲ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದು, ಸರಕಾರ ನನಗೆ ಪೆನ್‍ಷನ್ ನೀಡುತ್ತಿದೆ; ಅದರಲ್ಲಿ ಒಂದು ಲಕ್ಷ ರೂಪಾಯಿ ನೀಡುತ್ತಿದ್ದೇನೆ’ ಎಂದು ಭಾವುಕರಾದರು.ಇಡೀ ವಿಶ್ವವೇ ಸುಖದಿಂದಿರ ಬೇಕು. ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿರಬೇಕು ಎನ್ನುವ ಅಭಿಲಾಷೆ ನನ್ನದು ಎನ್ನುವುದರ ಜೊತೆಗೆ ಸರ್ವೇ ಜನಾಃ ಸುಖಿನೋ ಭವಂತು ಎಂದು ಕೈ ಮುಗಿದು ಪ್ರಾರ್ಥನೆ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಕರೆದೊಯ್ದು ಈ ಹೃದಯವಂತನ ಚೆಕ್ ಅನ್ನು ಅವರಿಂದಲೇ ಡಿಸಿಗೆ ಒಪ್ಪಿಸಿ ಮನೆ ರಸ್ತೆಯಲ್ಲಿ ಬಿಟ್ಟೆ. ಕಾರಿನಿಂದಿಳಿದು ‘ಇದರ ಬಗ್ಗೆ ಸುದ್ದಿ ಮಾಡುತ್ತೀರಾ? ಅದಕ್ಕೆ ಹಣ ನೀಡಬೇಕಾ?’ ಎಂದು ಪ್ರಶ್ನಿಸಿದರು. ದೇವರು ನಿಮಗೆ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸಿ ಬೀಳ್ಕೊಟ್ಟೆ.

-ಚಿದ್ವಿಲಾಸ್