ಮಡಿಕೇರಿ, ಏ. 4: ದೇಶದೆಲ್ಲೆಡೆ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಕೊರೊನಾ ಮಾರಿಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಆಡಳಿತ ವರ್ಗ ಸಾಕಷ್ಟು ಶ್ರಮಿಸುತ್ತಿದೆ. ದೇಶ, ರಾಜ್ಯ ಮಾತ್ರವಲ್ಲದೆ ಕೊಡಗಿನಲ್ಲೂ ಕೊರೊನಾ ವಿರುದ್ಧ ಕಟ್ಟೆಚ್ಚರ ವಹಿಸಲಾಗಿದೆ. ಹೊರದೇಶ ಗಳಿಂದ ಜಿಲ್ಲೆಗೆ ಹಿಂತಿರುಗುವವರ ಕುರಿತು ಹದ್ದಿನ ಕಣ್ಣಿರಿಸಲಾಗಿದೆ. ಜಿಲ್ಲೆಯಿಂದ ತೆರಳಿ ಹೊರಭಾಗದಲ್ಲಿ ನೆಲೆಸಿದ್ದು; ಕೊರೊನಾ ಭೀತಿಯಿಂದ ಜಿಲ್ಲೆಗೆ ಮರಳುತ್ತಿರುವವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯೂ ದಿನನಿತ್ಯ ಬಿರುಸಿನಿಂದ ನಡೆಯುತ್ತಿದೆ. ಹೀಗಿದ್ದರೂ ಕೂಡ ಜಿಲ್ಲಾಡಳಿತದ ಗಮನಕ್ಕೆ ಬರದೆ ಜಿಲ್ಲೆಗೆ ಆಗಮಿಸಿ ಇಲ್ಲಿಯೇ ಕಳೆದ 40 ದಿನಗಳಿಂದ ನೆಲೆಸಿದ್ದ ಶೂರ ತಬ್ಲಿಘಿ ಪಂಗಡಕ್ಕೆ ಸೇರಿದ 9 ಮಂದಿಯನ್ನು ಕಳೆದ ರಾತ್ರಿ ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಎಸ್‍ಪಿ ಡಾ. ಸುಮನ್ ಅವರು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಮೂಲತಃ ಗುಜರಾತ್‍ನವರಾಗಿ ರುವ ಒಂಭತ್ತು ಮಂದಿ ತಬ್ಲಿಘಿಗಳು ತಮ್ಮ ಕೇಂದ್ರ ಸ್ಥಾನವಾದ ಮುಂಬೈನಲ್ಲಿ ಸಮಾವೇಶವೊಂದನ್ನು ಮುಗಿಸಿ ಫೆಬ್ರವರಿ 2 ರಂದು ವೀರಾಜಪೇಟೆಗೆ ಬಂದಿದ್ದರು. ಬಳಿಕ ಅಲ್ಲಿನ ಮಸೀದಿ ಯೊಂದರಲ್ಲಿ ಧಾರ್ಮಿಕ ಕಾರ್ಯ ಮುಗಿಸಿ ಹಿಂತಿರುಗುವ ವೇಳೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಹಿಂತಿರುಗಲಾಗದೆ ವೀರಾಜಪೇಟೆಯಲ್ಲಿಯೇ ಬಾಡಿಗೆ ಮನೆಯೊಂದರಲ್ಲಿ ತಂಗಿದ್ದರು. ಆದರೆ ಈ ಬಗ್ಗೆ ಅವರುಗಳು ಪೊಲೀಸರಿಗೆ ಯಾವದೇ ಮಾಹಿತಿ ನೀಡಿರಲಿಲ್ಲ. ಕಳೆದ ರಾತ್ರಿ ಇವರುಗಳನ್ನು ಪತ್ತೆ ಮಾಡಲಾಗಿದ್ದು; ತಮ್ಮ ಬಗ್ಗೆ ಸ್ಥಳೀಯ ವೈದ್ಯರಿಗೆ ಮಾಹಿತಿ ನೀಡಿದ್ದಾಗಿ ಅವರುಗಳು ಹೇಳಿಕೆ ನೀಡಿದ್ದು; ಈ ಬಗ್ಗೆ ಸಮಗ್ರ ತನಿಖೆ ಮಾಡಲಾಗು ವದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರುಗಳು ಬಾಡಿಗೆ ಮನೆಯಲ್ಲಿಯೇ ತಂಗಿದ್ದರು; ಹೊರ ಭಾಗದಲ್ಲಿ ಎಲ್ಲೂ ಓಡಾಟ ನಡೆಸಿಲ್ಲ ಎಂದು ಖಚಿತ ಪಡಿಸಿದ ಎಸ್‍ಪಿ ಸುಮನ್, 9 ಮಂದಿ ತಬ್ಲಿಘಿಗಳು, ಮನೆ ಮಾಲೀಕ ಸೇರಿದಂತೆ ಹತ್ತು ಮಂದಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಗೃಹಪರೀಕ್ಷೆಗೆ ಒಳಪಡಿಸಲಾಗಿದ್ದು; ಅವರುಗಳ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.