ಕಣಿವೆ, ಏ. 4: ವಿಶ್ವ ವ್ಯಾಪ್ತಿಯಾಗಿ ಹರಡುತ್ತಿರುವ ಮಾರಕ ವೈರಸ್ ಅಮಾಯಕರ ಜೀವ ಬಲಿ ಪಡೆಯಬಾರದು ಎಂದು ಕರ್ತವ್ಯದ ಕರೆಗೆ ಓಗೊಟ್ಟು ರಸ್ತೆಗಿಳಿದ ಪೊಲೀಸರು, ವೈರಸ್ ಬಾಧಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹೆಣಗಾಡುತ್ತಿರುವ ವೈದ್ಯ ಸಿಬ್ಬಂದಿಗಳು ಹಾಗೂ ಅಂತಹ ಪ್ರಕರಣಗಳನ್ನು ಮಾಧ್ಯಮಗಳಲ್ಲಿ ಪಸರಿಸಲು ಜೀವದ ಹಂಗು ಮರೆತು ಕ್ಯಾಮರಾದಲ್ಲಿ ಸೆರೆಹಿಡಿವ ಪತ್ರಕರ್ತರು ಸೇರಿದಂತೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಮಂದಿಗೆ ನಾಗರಿಕರು ಗೌರವ ಸಲ್ಲಿಸಲೇಬೇಕಿದೆ. ಆ ಗೌರವ ಹೇಗಿರಬೇಕೆಂದರೆ, ಮಾರಕ ವೈರಸ್ಗೆ ಅಮಾಯಕ ಜನರು ಬಾಧಿತರಾಗದಂತೆ ಎಚ್ಚರ ವಹಿಸಿ ಜೀವ ಕಾಪಾಡಿಕೊಳ್ಳಲು ಮನೆಯಲ್ಲೇ ಇರಿ. ಮನೆ ಬಿಟ್ಟು ಹೊರ ಬಾರದಿರಿ ಎಂಬ ಸರ್ಕಾರದ ಕಟ್ಟಾಜ್ನೆಯನ್ನು ಮೀರದಿದ್ದರೆ ಅದೇ ಕಾನೂನು ಕಾಪಾಡುವ ಪೊಲೀಸರಿಗೆ ನಾವು ಕೊಡಬಹುದಾದ ಗೌರವ. ಸರ್ಕಾರದ ರೀತಿ-ನೀತಿ ಹಾಗೂ ನಿಯಮಾವಳಿಗೆ ಕಟಿಬದ್ಧರಾಗಿ ಶ್ವೇತ ವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವ ದಾದಿಯರು, ವೈರಸ್ ಬಾಧಿತರನ್ನು ತಪಾಸಣೆ ಮಾಡುವ ವೈದ್ಯರು, ರಕ್ತ ಹಾಗೂ ಕಫ ಪರೀಕ್ಷಿಸುವ ತಂತ್ರಜ್ಞರು ಸೇರಿದಂತೆ ಇಡೀ ವೈದ್ಯ ಸಿಬ್ಬಂದಿಗಳ ಆರೋಗ್ಯಕ್ಕೆ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ನಮ್ಮವರೆಂದು ಬಾವಿಸಿ ನಮ್ಮವರೊಡನೆಯೇ ಪ್ರಾರ್ಥಿಸಬೇಕು. ಕೊರೊನಾ ಪೀಡಿತರನ್ನು ತಪಾಸಣೆಗೈದು ಮದ್ದು ನೀಡುವ ವೈದ್ಯ ಸಿಬ್ಬಂದಿಗಳು ಧರಿಸುವ ವೈರಸ್ ಅಬಾಧಿತ ರಕ್ಷಾ ಕವಚವನ್ನು ತೊಟ್ಟ ಎಂಟು ಗಂಟೆಗಳ ಅವಧಿ ನೀರು ಕೂಡ ಕುಡಿಯುವ ಹಾಗಿಲ್ಲ. ಇನ್ನು ತಮ್ಮ ಮಡದಿ-ಮಕ್ಕಳು, ಅಪ್ಪ-ಅಮ್ಮ ಸೇರಿದಂತೆ ಮನೆ ಮಂದಿಯ ಜೊತೆ ಆ ಹೊತ್ತಿನಲ್ಲಿ ಮಾತನಾಡುವಂತೆಯೇ ಇಲ್ಲ. ಆ ವೈದ್ಯ ಸಿಬ್ಬಂದಿಗಳು ಶೌಚಾಲಯಕ್ಕೂ ತೆರಳುವಂತಿಲ್ಲ. ಅಂದರೆ ಊಹಿಸಬಹುದು ಎಷ್ಟರಮಟ್ಟಿಗೆ ಆ ವೈರಸ್ ನಿಯಂತ್ರಿತ ರಕ್ಷಾ ಕವಚ ಆ ಆರೋಗ್ಯ ರಕ್ಷಕರ ದೇಹದ ಹೊದಿಕೆಯಾಗಿರುತ್ತೆ ಎಂದು. ಇನ್ನು ಪೊಲೀಸರು ಹಗಲು-ರಾತ್ರಿ ಎನ್ನದೇ ಹೆದ್ದಾರಿಗಳಲ್ಲಿ, ರಸ್ತೆ ಮಧ್ಯೆ ನಿಂತು ವಾಹನಗಳ ತಪಾಸಣೆ ಹಾಗೂ ವಾಹನ ಚಲಾಯಿಸುವವರ ತಪಾಸಣೆ ಮಾಡುವುದು ಸುಲಭದ ಕೆಲಸವೇ ? ಅದ್ಯಾವ ಮನುಷ್ಯ ಆ ಮಾರಕ ವೈರಸ್ ಹೊತ್ತು ತಂದಿರುತ್ತಾನೋ, ಅಥವಾ ಆತನಿಗೆ ಅರಿವಿಲ್ಲದೇ ಆತನನ್ನು ಆ ಮಾರಣಾಂತಿಕ ವೈರಸ್ ಆವರಿಸಿರುತ್ತದೆಯೋ....ಅದ್ಯಾವುದರ ಪರಿವೇ ಇಲ್ಲದೇ ತನ್ನ ಕಾಯಕದಲ್ಲಿ ತಲ್ಲೀನರಾಗುವ ಪೊಲೀಸರು ಅವರನ್ನು ವಿಚಾರಿಸಿ ಪೂರ್ವಾಪರ ಪರಿಶೀಲಿಸಿ ಪ್ರಯಾಸ ಪಡುವ ರೀತಿ ನೋಡಿದರೆ ಆ ಕರ್ತವ್ಯ ಯಾರಿಗೆ ಬೇಕು ಎಂದೆನಿಸದೇ ಇರದು. ದಿನದ 24 ಗಂಟೆ ನಮ್ಮ ಜನರ ರಕ್ಷಣೆಗಾಗಿ ಅವರ ಹಾಗೂ ಅವರ ಅವಲಂಬಿತರ ಯೋಗಕ್ಷೇಮ ವನ್ನು ಮರೆತು ಕರ್ತವ್ಯ ನಿರ್ವಹಿಸುವ ಮಂದಿಗೆ ನಾವು ಇಂತಹ ಸಂದರ್ಭಗಳಲ್ಲಿ ವಿಶೇಷ ಸಲ್ಯೂಟ್ ನೀಡಲೇ ಬೇಕಿದೆ. ತನ್ನ ಸಮಯ ಪಾಲನೆಯ ಕರ್ತವ್ಯದ ಕರೆಗೆ ಓಗೊಟ್ಟು ಖಾಕಿ ಬಟ್ಟೆ ತೊಟ್ಟು ಹೊರಡಲು ಅನುವಾಗುತ್ತಿರುವುದನ್ನು ಕಂಡ ಪೊಲೀಸಪ್ಪನ ಮಗು ಹೇಳುತ್ತೆ ಅಪ್ಪಾ ನೀನು ರಜೆ ಮಾಡಪ್ಪಾ. ನೀನು ಡ್ಯೂಟಿ ಮಾಡುವಾಗ ವೈರಸ್ ಬಂದರೆ ನಮ್ಮ ಗತಿ ಏನಪ್ಪಾ. ಬೇಡಪ್ಪಾ ಹೋಗಬೇಡಪ್ಪಾ ಎಂದು ಘೀಳಿಡುವಾಗ ಆ ಅಪ್ಪನಿಗೆ ಹೇಗಾಗಬೇಡ. ತುರ್ತು ಸೇವೆಗಳ ಪಾಲನೆ ಮಾಡಬೇಕಾದ ಆ ಪೊಲೀಸರಿಗೂ ಮನೆ, ಹೆಂಡತಿ, ಮಕ್ಕಳು, ವಯಸ್ಸಾದ ಅಪ್ಪ ಅಮ್ಮ ಇರುತ್ತಾರೆ ಅಲ್ಲವೇ ? ಅವರು ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಕರ್ತವ್ಯದ ಪಣ ತೊಟ್ಟಾಗ ಸರ್ಕಾರದ ಆದೇಶಗಳ ಪಾಲಕರಾಗಿರುವುದರಿಂದ ಮನೆಯಿಂದ ಹೊರಬಂದು ಅನಗತ್ಯವಾಗಿ ಬೀದಿ ಸುತ್ತಬೇಡಿರೋ ಎಂದು ಹೇಳಿ ಹೇಳಿ ಸಾಕಾದಾಗ ಕೊನೆಗೆ ಏನು ಮಾಡಬೇಕಾಗುತ್ತದೆ ಹೇಳಿ...? ಬೇಕಂತಲೇ ಲಾಠಿ ಬೀಸುತ್ತಾರಾ ? ಅವರಿಗೂ ಹೃದಯವಿಲ್ಲವೇ ? ಅವರಿಗೂ ಮಾನವೀಯತೆ ಇಲ್ಲವೇ ? ಆ ಖಾಕಿಗಳು ಮಾಡುವ ಕಾಯಕವನ್ನು ನಾವು ಮಾಡಲಾದೀತಾ ? ನಮ್ಮ ಜನರು ಕೂಡ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮನಸೋ ಇಚ್ಛೆಯಿಂದ ವರ್ತಿಸಿದಾಗ ಲಾಠಿ ಬೀಸದೇ ಅನ್ಯ ಮಾರ್ಗವೇ ಇರಲಿಲ್ಲ ಹಾಗಾಗಿ ಕಳೆದ ವಾರ ನಮ್ಮ ಪೊಲೀಸರು ಲಾಠಿ ಬೀಸಿದರು. ಈಗ ಅದಕ್ಕೂ ಕೆಲವರು ಬೇರೆ ಬೇರೆ ಬಣ್ಣ ಕಟ್ಟಿ ಪೊಲೀಸರು ಇದೀಗ ಲಾಠಿ ಹಿಡಿಯುವುದೇ ಮಹಾ ಅಪರಾಧ ಎಂಬಂತೆ ಪೊಲೀಸರ ನೈತಿಕತೆಯನ್ನು ಕುಗ್ಗಿಸಹೊರಟರು. ಒಬ್ಬ ಜಿಲ್ಲಾಧಿಕಾರಿಗೂ ಹೆದರದ ಮನಸ್ಥಿತಿಯುಳ್ಳ ನಮ್ಮ ಜನ ಒಬ್ಬ ಪೊಲೀಸಪ್ಪಗೆ ಮಾತ್ರ ಹೆದರಬಲ್ಲರು. ಇಂತಹ ಅನಿವಾರ್ಯ ತುರ್ತು ಪರಿಸ್ಥಿತಿ ದೇಶದಲ್ಲಿರುವಾಗ ಜೀವಭಯ, ಕುಟುಂಬ ಸೌಖ್ಯಗಳನ್ನು ಲೆಕ್ಕಿಸದೇ ಕರ್ತವ್ಯ ಮಾಡುತ್ತಿರುವ ಸೇನಾನಿಗಳಿಗೆ ನಾವು ಕನಿಷ್ಟ ಗೌರವ ಸಲ್ಲಿಸೋಣ. ಆರೋಗ್ಯವಂತ ರಾಷ್ಟ್ರಕ್ಕಾಗಿ ದೇಶದ ಪ್ರಧಾನಿ ಕೊಟ್ಟ ಕರೆಗೆ ಮತ್ತು ಮನೆಯಲ್ಲೇ ಇರಿ ಎಂಬ ಕೋರಿಕೆಗೆ ನಾವೆಲ್ಲಾ ಕಟಿಬದ್ಧರಾಗೋಣ. ದೇಶ ವಾಸಿಗಳ ಆರೋಗ್ಯಕ್ಕೂ ಸಾಮೂಹಿಕವಾಗಿ ಪ್ರಾರ್ಥಿಸೋಣ. ನಾವೆಲ್ಲಾ ಪರಸ್ಪರ ದ್ವೇಷವನ್ನು ದೂರವಿಟ್ಟು ಮನುಜ ಮತಕ್ಕಾಗಿ ವಿಶ್ವಪಥಕ್ಕಾಗಿ ಸುಂದರ ದೇಶ ಕಟ್ಟೋಣ. - ಕೆ.ಎಸ್. ಮೂರ್ತಿ