ಶನಿವಾರಸಂತೆ, ಏ. 4: ಸಮೀಪದ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಕಲ್ಪಿಸಿರುವ ನೀರಿನ ಸೌಲಭ್ಯವನ್ನು ಬಳಸಿ ವೈದ್ಯಾಧಿಕಾರಿಯವರ ವಸತಿ ಗೃಹದ ಪಕ್ಕದ ಜಾಗದಲ್ಲಿ ಶುಂಠಿ ಬೆಳೆಯಲು ದುರ್ಬಳಕೆ ಮಾಡಲಾಗಿದೆ ಎಂದು ಕರವೇ (ಶಿವರಾಮೇ ಗೌಡರ ಬಣ) ಕಾರ್ಯ ಕರ್ತರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯವಸ್ಥೆ ಮಾಡಿ ಕೊಟ್ಟಿರುವ ನೀರನ್ನೇ ಬಳಸಿ ಕೊಂಡು ಕೇಂದ್ರಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಶುಂಠಿ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ವಸತಿ ಗೃಹದ ಸರಕಾರಿ ಜಾಗದಲ್ಲಿ ಜೆಸಿಬಿ ಯಂತ್ರ ಬಳಸಿ ಅಗೆದು, ಪಾತಿ ಮಾಡಿ ಶುಂಠಿ ಬೆಳೆಗೆ ನೀರುಣಿಸುವ ಕೆಲಸ ನಡೆದಿದೆ. ಸರಕಾರದ ಜಾಗ ಮತ್ತು ನೀರಿನ ದುರ್ಬಳಕೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಅವರಿಗೆ ಕ್ರಮಕೈಗೊಳ್ಳಲು ದೂರು ಸಲ್ಲಿಸಲಾಗುವುದು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಎಚ್ಚರಿಸಿ ಹೇಳಿಕೆ ನೀಡಿದ್ದಾರೆ.