ರಾವಣನೇ ಮೊದಲಾದ ರಾಕ್ಷಸರನ್ನು ಸಂಹರಿಸಿದ ಬಳಿಕ ಪಟ್ಟಾಭಿಷಿಕ್ತನಾಗಿ ರಾಜ್ಯಭಾರವನ್ನು ವಹಿಸಿಕೊಂಡ ಶ್ರೀರಾಮನನ್ನು ಅಭಿನಂದಿಸುವ ಸಲುವಾಗಿ ಸಮಸ್ತ ಮಹರ್ಷಿಗಳೂ ಅಯೋಧ್ಯಾ ಪಟ್ಟಣಕ್ಕೆ ಆಗಮಿಸಿದರು. ಪೂರ್ವದಿಕ್ಕಿನಲ್ಲಿ ವಾಸಮಾಡುತ್ತಿದ್ದ ಕೌಶಿಕ, ಯವಕ್ರೀತ, ಗಾಗ್ರ್ಯ,ಗಾಲವ ಮತ್ತು ಕಣ್ವ-ಇವರೆಲ್ಲರೂ ಅಯೋಧ್ಯೆಗೆ ಆಗಮಿಸಿದರು. ದಕ್ಷಿಣ ದಿಕ್ಕಿನಲ್ಲಿ ವಾಸಮಾಡುತ್ತಿದ್ದ ಸ್ವಸ್ತ್ಯಾತ್ರೇಯ, ನಮುಚಿ, ಪ್ರಮುಚಿ, ಸುಮುಖ ಮತ್ತು ವಿಮುಖ ಇವರೆಲ್ಲರೂ ಅಗಸ್ತ್ಯರ ನೇತೃತ್ವದಲ್ಲಿ ಅಯೋಧ್ಯಾಪಟ್ಟಣಕ್ಕೆ ಬಂದರು. ಪಶ್ಚಿಮ ದಿಕ್ಕಿನಲ್ಲಿ ವಾಸ ಮಾಡುತ್ತಿದ್ದ ನೃಷಂಗು, ಕವಷ, ಧೌಮ್ಯ ಹಾಗೂ ಕೌಶೇಯ-ಇವರೆಲ್ಲರೂ ಶಿಷ್ಯ ಸಹಿತರಾಗಿ ಅಯೋಧ್ಯೆಗೆ ಆಗಮಿಸಿದರು. ಅದೇ ರೀತಿಯಲ್ಲಿ ಉತ್ತರದಿಕ್ಕಿನ ನಿವಾಸಿಗಳಾದ ವಸಿಷ್ಠ, ಕಶ್ಯಪ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಅತ್ರಿ ಹಾಗೂ ಭರದ್ವಾಜ-ಈ ಸಪ್ತರ್ಷಿಗಳೂ ಶ್ರೀರಾಮನನ್ನು ಅಭಿನಂದಿಸುವ ಸಲುವಾಗಿ ಅಯೋಧ್ಯೆಗೆ ಆಗಮಿಸಿದರು. ಅವರೆಲ್ಲರೂ ಅಗ್ನಿಯ ತೇಜಸ್ಸಿಗೆ ಸಮಾನವಾದ ತೇಜಸ್ಸಿನಿಂದ ಕೂಡಿದ್ದರು. ವೇದ-ವೇದಾಂಗ ಪಾರಂಗತರಾಗಿದ್ದರು. ನಾನಾ ವಿಧವಾದ ಶಾಸ್ತ್ರಗಳಲ್ಲಿಪರಣಿತರಾಗಿದ್ದರು. ಮಹಾತ್ಮರಾದ ಆ ಮಹರ್ಷಿಗಳೆಲ್ಲರೂ ಶ್ರೀರಾಮನ ಅರಮನೆಗೆ ಬಂದು ಸೇರಿದರು, ಶ್ರೀರಾಮನಿಗೆ ಹೇಳಿ ಕಳುಹಿಸುವ ಸಲುವಾಗಿ ಮಹಾದ್ವಾರದಲ್ಲಿ ನಿಂತರು. ಮುನಿಶ್ರೇಷ್ಠರಾದ ಅಗಸ್ತ್ಯರು ದ್ವಾರಪಾಲಕನಿಗೆ ಹೇಳಿದರು: “ದ್ವಾರ ಪಾಲಕನೇ, ನಾವೆಲ್ಲರೂ ಶ್ರೀರಾಮನನ್ನು ಸಂದರ್ಶಿಸುವ ಸಲುವಾಗಿ ಬಂದಿರುವ ವಾರ್ತೆಯನ್ನು ಶ್ರೀರಾಮನಿಗೆ ನಿವೇದಿಸು” ದ್ವಾರಪಾಲಕನು ತಕ್ಷಣವೇ ಅಯೋಧ್ಯಾಪತಿಯಾದ ಶ್ರೀರಾಮನಿಗೆ ನಿವೇದಿಸಿದನು. ತೇಜೋವಿಶಿಷ್ಟರಾಗಿರುವ ಮಹರ್ಷಿಗಳು ತನ್ನನ್ನು ಕಾಣಲು ಬಂದಿರುವರೆಂಬ ವಾರ್ತೆಯು ತಿಳಿದೊಡನೆಯೇ ಶ್ರೀ ರಾಮನು ಅವರೆಲ್ಲರನ್ನೂ ಸುಖಪೂರ್ವಕವಾಗಿ ಒಳಕ್ಕೆ ಕರೆತರುವಂತೆ ಆ ದ್ವಾರಪಾಲಕನಿಗೆ ಆಜ್ಞಾಪಿಸಿದನು. ಶ್ರೀರಾಮನ ಆಜ್ಞೆಯಂತೆ ದ್ವಾರಪಾಲಕನು ಬಾಗಿಲಿನಲ್ಲಿ ನಿಂತಿದ್ದ ಎಲ್ಲ ಮಹರ್ಷಿಗಳನ್ನೂ ಶ್ರೀರಾಮನ ಸನ್ನಿಧಿಗೆ ಕರೆತರಲು, ಶ್ರೀರಾಮನು ಒಡನೆಯೇ ಮೇಲೆದ್ದು ಕೈಜೋಡಿಸಿಕೊಂಡು ಆದರ ಪೂರ್ವಕವಾಗಿ ಅಘ್ರ್ಯಪಾದ್ಯಾದಿಗಳ ನ್ನಿತ್ತು ಗೋವನ್ನೂ ಮಹರ್ಷಿಗಳಿಗೆ ಸಮರ್ಪಿಸಿದನು.

ಹೀಗೆ ಶ್ರೀರಾಮನು ಮಹರ್ಷಿಗಳೆಲ್ಲರಿಗೂ ಶುದ್ಧ ಮನಸ್ಸಿನಿಂದ ನಮಸ್ಕರಿಸಿ ಕುಳಿತುಕೊಳ್ಳಲು ಎಲ್ಲರಿಗೂ ಚಿನ್ನದ ಆಸನಗಳಲ್ಲಿ ಕುಳ್ಳಿರಿಸಿದನು. ಶ್ರೀರಾಮನು ಶಿಷ್ಯ ಸಹಿತರಾಗಿದ್ದ ಆ ಎಲ್ಲ ಪ್ರಮುಖ ಮಹರ್ಷಿಗಳ ಕುಶಲ ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡನು. ಅನಂತರ ವೇದವಿದರಾದ ಮಹರ್ಷಿಗಳು ಶ್ರೀರಾಮನಿಗೆ ಹೇಳತೊಡಗಿದರು:

ಮಹಾಬಾಹುವೇ, ರಘುನಂದನ, ನಾವು ಸರ್ವತ್ರ ಕುಶಲಿಗಳಾಗಿ ದ್ದೇವೆ, ಸೌಭಾಗ್ಯವಶಾತ್ ಶತ್ರುಗಳನ್ನು ಧ್ವಂಸ ಮಾಡಿ ಕುಶಲನಾಗಿರುವ ನಿನ್ನನ್ನು ನಾವು ನೋಡುತ್ತಿದ್ದೇವೆ. ಲೋಕ ಕಂಟಕನಾಗಿದ್ದ ರಾವಣ ಹಾಗೂ ಮತ್ತಿತರ ಮಹಾಸುರರು ನಿನ್ನಿಂದ ಹತನಾ ದರು. ಮಹಾಬಲಿಷ್ಠ ರನ್ನು ಸಂಹರಿಸಿ ವಿಜಯಿಯಾಗಿರುವ ನಿನ್ನ ದರ್ಶನ ನಮಗೆ ಹರ್ಷ ಮೂಡಿಸಿದೆ ಎಂದು ಋಷಿ ಮುನಿ ಗಳು ಸಂತಸ ವ್ಯಕ್ತ ಪಡಿಸಿದರು.

ಎಲ್ಲಕ್ಕಿಂತ ಮಿಗಿ ಲಾಗಿ ಇಂದ್ರಜಿತುವಿನ ವಧೆ ಒಂದು ಮಹತ್ಕಾರ್ಯವಾಗಿದೆ ಎಂದರು. ಇದರಿಂದ ಅಚ್ಚರಿಗೊಂಡ ಶ್ರೀ ರಾಮನು ಎಲ್ಲರಿಗಿಂತ ಮಿಗಿಲಾದ ಪರಾಕ್ರಮಿ ಇಂದ್ರಜಿತು ಎನ್ನಲು ಕಾರಣವೇನು ? ಎಂದು ಕುತೂಹಲದಿಂದ ಕೇಳಿದನು.

ಆಗ ಅಗಸ್ತ್ಯ ಮಹರ್ಷಿಗಳು ಇಂದ್ರಜಿತುವಿನ ಪೂರ್ವೇತಿಹಾಸ ವನ್ನು, ಅವನಿಗೆ ಲಭ್ಯವಾಗಿದ್ದ ಬ್ರಹ್ಮನ ವರ, ಅವನ ಪಿತೃ ರಾವಣನ ಹಿನ್ನೆಲೆ, ಮಾನವರ ಹೊರತು ಉಳಿದವರಿಂದ ಸಾವಿಲ್ಲದಂತೆ ರಾವಣನು ಪಡೆದ ವರ, ಆತನಿಂದ ಸ್ತ್ರೀಯರ ಮೇಲಿನ ಅತ್ಯಾಚಾರ, ವರ ಬಲದಿಂದ ಮೂರು ಲೋಕವನ್ನು ಗೆದ್ದ ಪರಿ- ಈ ಎಲ್ಲದರ ಕುರಿತು ಕಣ್ಣಿಗೆ ಗೋಚರವಾಗುವ ರೀತಿ ಶ್ರೀರಾಮನಿಗೆ ವರ್ಣಿಸಿದರು. ಜೊತೆಗೆ ವಾಲಿ, ಸುಗ್ರೀವರ ಚರಿತ್ರೆ, ಶ್ರಿ ರಾಮನ ಪರಮ ಭಕ್ತನಾದ ಆಂಜನೇಯನ ಸಂಪೂರ್ಣ ವೃತ್ತಾಂತವನ್ನು ಪ್ರತ್ಯಕ್ಷ ಗೋಚರವಾಗು ವಂತೆ ವಿವರಿಸಿದರು. ಈ ಎಲ್ಲರ ಜೀವನ ಚರಿತ್ರೆಯನ್ನು ಕೇಳಿದ ಶ್ರೀರಾಮನು ನಿಜಕ್ಕೂ ವಿಸ್ಮಯಗೊಂಡನು. ಬಳಿಕ ಅಗಸ್ತ್ಯರಾದಿಯಾಗಿ ಉಪಸ್ಥಿತರಿದ್ದ ಎಲ್ಲ ಮಹರ್ಷಿಗಳನ್ನುದ್ದೇಶಿಸಿ ಕೈ ಮುಗಿದು ನಮಸ್ಕರಿಸಿ ಹೇಳಿದನು: ಮುನೀಶ್ವರರೆ, ತಮ್ಮ ಸಂದರ್ಶನ ಮಾತ್ರದಿಂದ ನಾವೆಲ್ಲರೂ ಪರಮ ಸಂತುಷ್ಟರಾದೆವು. ಮುಂದೆ ನಾನು ಯಜ್ಞಾನುಷ್ಠಾನಗಳನ್ನು ಮಾಡಲು ಬಯಸಿದ್ದೇನೆ. ನೀವೆಲ್ಲರೂ ಬಂದು ಅನುಗ್ರಹಿಸಬೇಕು ಎಂದು ಕೋರಿದನು.

ಮಹರ್ಷಿಗಳು “ಏವಮಸ್ತು” ಹಾಗೆಯೇ ಆಗಲಿ ಎಂದು ಆಶೀರ್ವಚನ ಮಾಡಿ ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿದರು.

ಕೆಲಕಾಲಾನಂತರ ಅಗಸ್ತ್ಯರು ತಮ್ಮ ಆಶ್ರಮದಲ್ಲಿ “ಜಲಶಯ್ಯಾ” ಎಂಬ ವ್ರತವನ್ನು ಕೈಗೊಂಡು ಹನ್ನೆರಡು

ವರ್ಷಗಳನ್ನು ಪೂರೈಸಿದರು. ಈ ವ್ರತ ಪೂರ್ಣಗೊಂಡ ಬಳಿಕ ಅವರನ್ನು ಅಭಿನಂದಿಸಲು ದೇವತೆಗಳು ಅವರ ಆಶ್ರಮಕ್ಕೆ ಹೊರಟಿದ್ದರು. ಆ ಸಂದರ್ಭ ಪುಷ್ಪಕ ವಿಮಾನದಲ್ಲಿ ಲೋಕ ಸಂಚಾರ ಮಾಡುತ್ತ ಕಾಕತಾಳೀಯವೆಂಬಂತೆ ಶ್ರೀ ರಾಮನೂ ಕೂಡ ಅದೇ ದಾರಿಗಾಗಿ ಬಂದು ದೇವತೆಗಳನ್ನು ನೋಡಿ ಅವರಿಂದ ವಿಷಯ ತಿಳಿದು ತಾನು ಕೂಡ ಅವರ ಆಶ್ರಮಕ್ಕೆ ತೆರಳಲು ಉತ್ಸುಕತೆ ತೋರಿದನು. ಮೊದಲು ತೆರಳಿದ ದೇವತೆಗಳನ್ನೆಲ್ಲ ಅಗಸ್ತ್ಯರು ಉಪಚರಿಸಿದರು. ಬಳಿಕ ಅವರೆಲ್ಲ ಸ್ವರ್ಗ ಲೋಕಕ್ಕೆ ಮರಳಿದರು. ಅಷ್ಟರಲ್ಲೇ ಶ್ರೀರಾಮನು ಅಗಸ್ತ್ಯಾಶ್ರಮಕ್ಕೆ ಬಂದು ಸೇರಿದನು. ಪುಷ್ಪಕ ವಿಮಾನದಿಂದ ಇಳಿದು ಮಹರ್ಷಿಗಳಿಗೆ ಅಭಿವಂದಿಸಿದನು. ಅಗಸ್ತ್ಯರು ಆತನಿಗೆ ರಾಜಾತಿಥ್ಯ ಕಲ್ಪಿಸಿದರು. ಬಳಿಕ ಅಗಸ್ತ್ಯರು ತನ್ನ ಬಳಿಯಿದ್ದ ವಿಶ್ವ ಕರ್ಮ ನಿರ್ಮಿತ ದಿವ್ಯಾಭರಣವನ್ನು ಶ್ರೀರಾಮನಿಗೆ ನೀಡಿದರು. ಆಗ ಶ್ರೀ ರಾಮನು ತಾನು ಕ್ಷತ್ರಿಯನಾಗಿ ದಾನ ತೆಗೆದುಕೊಳ್ಳುವದು ಸರಿಯಲ್ಲ. ಬ್ರಾಹ್ಮಣರು ಮಾತ್ರ ದಾನ ಪಡೆಯುವರು ಎಂದು ವಿಮರ್ಶಿಸಿದನು. ಈ ಬಗ್ಗೆ ಉತ್ತರಿಸಿದ ಅಗಸ್ತ್ಯರು “ನೀನು ಪ್ರಜೆಗಳಿಗೆ ರಾಜನಾಗಿ ಈ ದಾನವನ್ನು ಪಡೆಯುವದು ಹೆಚ್ಚು ಸೂಕ್ತವಾಗಿದೆ” ಎಂದು ಒಪ್ಪಿಸಿ ಆ ಅಮೂಲ್ಯ ಆಭರಣವನ್ನು ಶ್ರೀ ರಾಮನ ಕೈಗಿತ್ತರು. ಬಳಿಕ ಅಗsಸ್ತ್ಯರು ಶ್ರೀ ರಾಮನಿಗೆ ಅನೇಕ ಪೌರಾಣಿಕ ಕತೆಗಳನ್ನೂ, ಹಿತವಚನವನ್ನೂ ನೀಡಿದರು. ಅಂದು ರಾತ್ರಿ ಶ್ರೀ ರಾಮನು ಅಗಸ್ತ್ಯಾಶ್ರಮದಲ್ಲಿಯೇ ಉಳಿದು ಮರುದಿನ ಅವರಿಂದ ಬೀಳ್ಕೊಂಡು ಅಯೋಧ್ಯೆಗೆ ಹಿಂತಿರುಗಿದನು.

ಅಗಸ್ತ್ಯರ ಜನನ ರಹಸ್ಯ

ಅಗಸ್ತ್ಯರ ಜನನವೇ ಒಂದು ಕುತೂಹಲಕರಿ ಘಟ್ಟ. ಮಹರ್ಷಿ ಮರೀಚಿಗಳು ಪ್ರಜಾಪತಿ ಬ್ರಹ್ಮನ ಪುತ್ರರು. ಈ ಮರೀಚಿಯ ಮಗನೇ ಕಶ್ಯಪ. ಕಶ್ಯಪರಿಗೆ ಅದಿತಿಯಲ್ಲಿ ಮಿತ್ರಾ ಹಾಗೂ ವರುಣ ಎಂಬ ಯಮಳರು(ಅವಳಿ) ಜನಿಸುತ್ತಾರೆ. ಒಮ್ಮೆ ಈ ಮಿತ್ರಾ ವರುಣರು ಭವ್ಯವಾದ ಯಜ್ಞವೊಂದನ್ನು ಮಾಡಲು ತೊಡಗಿದರು. ಅದಕ್ಕಾಗಿ ಎಲ್ಲ ದೇವತೆಗಳೂ, ಮುನಿಗಳೂ ಪಿತೃ ದೇವತೆಗಳೂ ಬಂದು ಸೇರಿದ್ದರು. ಅಲ್ಲಿಗೆ ಅಪ್ಸರೆಯರಲ್ಲಿ ಅತಿ ಲಾವಣ್ಯವತಿಯಾದ ಊರ್ವಶಿ ಬರುತ್ತಾಳೆ. ಯಜ್ಞ ದೀಕ್ಷಾಬದ್ಧರಾದ ಮಿತ್ರಾ ವರುಣರು ಈ ಊರ್ವಶಿಯನ್ನು ನೋಡಿದರು. ಅವಳನ್ನು ನೋಡಿದ ಮಾತ್ರದಿಂದಲೇ ಮಿತ್ರಾ ವರುಣರಿಗೆ ಮನಸ್ಸಿನಲ್ಲಿ ವಿಕಾರವುಂಟಾಯಿತು. ಕಠೋರವಾದ ನಿಷ್ಠೆಯಿಂದ ಆಚರಿಸಿದ ಅವರುಗಳ ಬ್ರಹ್ಮಚರ್ಯ ಸಡಿಲಗೊಂಡಿತು. ಅವರಿಬ್ಬರಿಗೂ ವೀರ್ಯಸ್ಖಲನವಾಯಿತು. ಅದನ್ನು ಮಣ್ಣಿನ ಕುಂಭವೊಂದರಲ್ಲಿ ರಕ್ಷಿಸಲಾಯಿತು. ಅದರಿಂದ ಎರಡು ಶಿಶುಗಳು ಜನಿಸಿದವು. ಹಾಗೆ ಹುಟ್ಟಿದ ಮೊದಲನೆ ಶಿಶುವೆ ಅಗಸ್ತ್ಯ. ಎರಡನೇ ಶಿಶುವೇ ವಸಿಷ್ಠ. ಇದರಿಂದಾಗಿ ಅಗಸ್ತ್ಯರನ್ನು ಕುಂಭ ಸಂಭವ ಎಂದು ಕರೆಯಲಾಗುತ್ತದೆ. ವಸಿಷ್ಠರು ಅಗಸ್ತ್ಯರ ಅವಳಿ ಸಹೋದರ. ಅಗಸ್ತ್ಯರನ್ನು ಅಗ್ನಿಯ ಅವತಾರ ಎಂದರೆ, ವಸಿಷ್ಠರನ್ನು ವಾಯುವಿನ ಅವತಾರ ಎಂದು ಪರಿಗಣಿಸಲಾಗಿದೆ.

(ಆಧಾರ : ಬೆಂಗಳೂರು ಭಾರತದರ್ಶನ ಪ್ರಕಾಶನದ ‘‘ವಾಲ್ಮೀಕಿ ರಾಮಾಯಣ’’ ಮೈಸೂರು ಗೀತಾ ಬುಕ್ ಹೌಸ್‍ನ ಪುರಾಣ ಭಾರತಕೋಶ ಗ್ರಂಥಗಳ ಕೃಪೆ)ನಿಮ್ಮೊಂದಿಗೆ......ಮುಕ್ತ ನುಡಿ....

ಕಾವೇರಿಯು ತಾನು ನದಿಯಾಗಿ ಹರಿಯುವ ಮುನ್ನ ಲೋಪಾಮುದ್ರೆಯಾಗಿದ್ದಳು. ಅವಳು ಅಗಸ್ತ್ಯರ ಪತ್ನಿಯಾಗಿದ್ದಳು. ಆಕೆ ಆರಿಸಿಕೊಂಡ ಪತಿ ಅಗಸ್ತ್ಯರ ಪ್ರಭಾವ ವಿಶ್ವ ಮಟ್ಟದಲ್ಲಿ ಯಾವ ರೀತಿಯಿತ್ತು ಎಂಬ ಚರಿತ್ರೆಯನ್ನು ಇದುವರೆಗೂ ಕಾವೇರಿ ಕಥನದಲ್ಲಿ ಸೇರಿಸಲಾಗಿತ್ತು. ಮಹಾನ್ ಋಷಿ ಅಗಸ್ತ್ಯರ ಹಾಗೂ ಪೂರಕವಾಗಿ ಕೆಲವೆಡೆ ಲೋಪಾಮುದ್ರೆಯ ಚರಿತ್ರೆಯನ್ನು ಹಿಂದೂ ಧಾರ್ಮಿಕ ಉದ್ಗ್ರಂಥಗಳ ಆಧಾರದಿಂದ ಕೊಡಗಿನ ಜನತೆಯ ಗಮನಕ್ಕೆ ತರಲಾಗಿದೆ. ಕಾವೇರಿಯು ನದಿಯಾಗಿ ಹರಿಯುವ ಮುನ್ನ ಅಗಸ್ತ್ಯರ ಪತ್ನಿಯಾಗಿ ಲೋಪಾಮುದ್ರೆಯಾಗಿದ್ದುದರಿಂದ ಅಗಸ್ತ್ಯರ ಚರಿತ್ರೆಯನ್ನು ತಿಳಿದುಕೊಳ್ಳುವದೂ ಕೊಡಗಿನ ಜನತೆಗೆ ಅತ್ಯಗತ್ಯ. ಅಗಸ್ತ್ಯರ ಚರಿತ್ರೆಯ ಪ್ರಮುಖ ಘಟ್ಟಗಳು ಇದೀಗ ಮುಗಿದಿದೆ. ಅವರ ಅತ್ಯದ್ಭುತ ತಪೋಶಕ್ತಿ, ಲೋಕಕಲ್ಯಾಣದ ಹಿತದೃಷ್ಟಿಯನ್ನು ಓದುಗರಿಗೆ ಪರಿಚಯ ಮಾಡಿಕೊಡಲಾಗಿದೆ. ಇಂತಹ ಧಾರ್ಮಿಕ ಉದ್ಗ್ರಂಥಗಳ ಆಧಾರದಿಂದ ಕೊಡಗಿನ ಜನತೆಯ ಗಮನಕ್ಕೆ ತರಲಾಗಿದೆ. ಕಾವೇರಿಯು ನದಿಯಾಗಿ ಹರಿಯುವ ಮುನ್ನ ಅಗಸ್ತ್ಯರ ಪತ್ನಿಯಾಗಿ ಲೋಪಾಮುದ್ರೆಯಾಗಿದ್ದುದರಿಂದ ಅಗಸ್ತ್ಯರ ಚರಿತ್ರೆಯನ್ನು ತಿಳಿದುಕೊಳ್ಳುವದೂ ಕೊಡಗಿನ ಜನತೆಗೆ ಅತ್ಯಗತ್ಯ. ಅಗಸ್ತ್ಯರ ಚರಿತ್ರೆಯ ಪ್ರಮುಖ ಘಟ್ಟಗಳು ಇದೀಗ ಮುಗಿದಿದೆ. ಅವರ ಅತ್ಯದ್ಭುತ ತಪೋಶಕ್ತಿ, ಲೋಕಕಲ್ಯಾಣದ ಹಿತದೃಷ್ಟಿಯನ್ನು ಓದುಗರಿಗೆ ಪರಿಚಯ ಮಾಡಿಕೊಡಲಾಗಿದೆ. ಇಂತಹ ಜನತೆ ಅತ್ಯಂತ ಆದರದಿಂದ ಕಾವೇರಿ ಕಥನವನ್ನು ಪ್ರೋತ್ಸಾಹಿಸಿ ರುವದಕ್ಕೆ ಲೇಖಕ ಆಭಾರಿ. ಕೊಡಗಿನ ಪುಣ್ಯ ಭೂಮಿಯ ಈ ಕಥನವು ಪೂರ್ಣ ಮಾಹಿತಿಗಳೊಂದಿಗೆ ಇನ್ನೂ ಬಹಳಷ್ಟು ಕಂತುಗಳಲ್ಲಿ ಪ್ರಕಟಗೊಳ್ಳಲಿದೆ. ಕಥಾಸ್ವರೂಪದ ಮಾಹಿತಿಯೊಂದಿಗೆ ಇತರ ಸಮಗ್ರ ಸಂಬಂಧಿತ ಅಂಶಗಳನ್ನೂ ಅಳವಡಿಸಲಾಗುತ್ತದೆ.

-ಲೇಖಕ