ಗೋಣಿಕೊಪ್ಪಲು, ಏ. 4: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವ ಮೂಲ ಉದ್ದೇಶದಿಂದ ಗೋಣಿಕೊಪ್ಪ ನಗರದ ರಸ್ತೆ ಬದಿಯ ವ್ಯಾಪಾರವನ್ನು ನಿಷೇಧಗೊಳಿ ಸಲಾಗಿದೆ. ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವಾರದ ಮೂರು ದಿನಗಳಲ್ಲಿ ಆಹಾರ ಸಾಮಗ್ರಿ ಹಾಗೂ ತರಕಾರಿಗಳನ್ನು ಖರೀದಿಸಲು ನಾಗರಿಕರು ಹೆಚ್ಚಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ. ಸಾಮಾಜಿಕ ಅಂತರ ವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು. ಹೊರ ಜಿಲ್ಲೆ ಹಾಗೂ ತಾಲೂಕು ಗಳಿಂದ ಹೆಚ್ಚಾಗಿ ವ್ಯಾಪಾರಸ್ಥರು ಗೋಣಿಕೊಪ್ಪ ನಗರಕ್ಕೆ ಆಗಮಿಸಿ ರಸ್ತೆ ಬದಿಯಲ್ಲಿ ತರಕಾರಿ, ಸೊಪ್ಪು, ಟೊಮೆಟೋ, ಹಣ್ಣು ಇತ್ಯಾದಿ ವ್ಯಾಪಾರ ಆರಂಬಿಸಿದ್ದರು. ಇದರಿಂದ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿತ್ತು. ಪೊಲೀಸರಿಗೆ ಇವರನ್ನು ನಿಯಂತ್ರಣ ಮಾಡಲು ಕಷ್ಟ ವಾಗುತ್ತಿತ್ತು, ಇದನ್ನು ಮನಗಂಡು ಇವರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ತಮ್ಮ ವ್ಯಾಪ್ತಿಯ ಪ್ರದೇಶವನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ. ಈ ಕೆಲಸಕ್ಕೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರು ಬೆಂಬಲ ಸೂಚಿಸಿದ್ದಾರೆ. ತುರ್ತು ಸಭೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ವ್ಯಾಪಾರಸ್ಥರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಯಾರೂ ಕೂಡ ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಿಲ್ಲ. ಒಂದು ವೇಳೆ ವ್ಯಾಪಾರ ಕಂಡು ಬಂದಲ್ಲಿ ಕಠಿಣ ಕ್ರಮಕೈಗೊಳ್ಳಲಾಗು ವುದು ಎಂದು ತಿಳಿಸಿದರು.ಈ ಸಂದರ್ಭ ಮಾತನಾಡಿದ ಗೋಣಿಕೊಪ್ಪ ಆರ್.ಎಂ.ಸಿ. ಅಧ್ಯಕ್ಷ ಸುಜಾ ಪೂಣಚ್ಚ ಆರ್.ಎಂ.ಸಿ.ಯ ಖಾಲಿ ಜಾಗ ಹಾಗೂ ರಸ್ತೆ ಬದಿಯ 5 ಮಳಿಗೆಗಳಲ್ಲಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಿದ್ದೇವೆ ಇದರ ಪ್ರಯೋಜನ ಪಡೆಯುವ ಮೂಲಕ ಜನ ಸಂದಣಿ ಕಡಿಮೆ ಮಾಡಬಹುದು ಎಂದರು.

ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಅದೇಂಗಡ ವಿನು ಚಂಗಪ್ಪ ಮಾತನಾಡಿ ಆರ್.ಎಂ.ಸಿ. ಯಾರ್ಡ್ ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆಗೆ ಖಾಲಿ ಜಾಗ ಸೇರಿದಂತೆ ವ್ಯಾಪಾರಸ್ಥರಿಗೆ ಬಿಸಿಲಿನ ತಾಪ ತಡೆಯಲು ನೆರಳಿನ ವ್ಯವಸ್ಥೆ ಇರುವುದರಿಂದ ಇದರ ಪ್ರಯೋಜನ ಪಡೆಯಲು ತಿಳಿಸಿದರು. ತರಕಾರಿ ಹಾಗೂ ಹಣ್ಣಿನ ವ್ಯಾಪಾರಸ್ಥರಿಗೆ ಜಿಲ್ಲಾಡಳಿತ ನೀಡಿರುವ ದಿನಗಳಲ್ಲಿ ವ್ಯಾಪಾರ ನಡೆಸಲು ಯಾವುದೇ ಶುಲ್ಕವನ್ನು ವಿಧಿಸದೆ ಉಚಿತವಾಗಿ ಮಳಿಗೆ ಹಾಗೂ ಖಾಲಿ ಜಾಗವನ್ನು ನೀಡಲಾಗುವುದು ಎಂದರು. ಮಳಿಗೆಗಳ ಕೀ ಅನ್ನು ತಾಲೂಕಿನ ತಹಶೀಲ್ದಾರ್ ನಂದೀಶ್ ಕುಮಾರ್ ಅವರಿಗೆ ಇದೆ ಸಂದರ್ಭ ಹಸ್ತಾಂತರ ಮಾಡಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ನಂದೀಶ್ ಕುಮಾರ್, ಆರ್.ಎಂ.ಸಿ. ಉಪಾಧ್ಯಕ್ಷ ಸುಬ್ರಹ್ಮಣಿ, ಮಾಜಿ ಅದ್ಯಕ್ಷ ಹಾಲಿ ನಿರ್ದೇಶಕರಾದ ಸುವೀನ್ ಗಣಪತಿ, ಆದೇಂಗಡ ವಿನು ಚಂಗಪ್ಪ, ನಿರ್ದೇಶಕ ಅಜ್ಜಿಕುಟ್ಟಿರ ಪ್ರವೀಣ್, ಗುಮ್ಮಟೀರ ಕಿಲನ್ ಗಣಪತಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಕಾಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೆಮಾಡ ಸುನಿಲ್ ಮಾದಪ್ಪ, ಆರ್‍ಎಂಸಿ ಕಾರ್ಯದರ್ಶಿ ಎಸ್. ಶ್ರೀಧರ್ ಸೇರಿದಂತೆ ಮುಂತಾದವರು ಹಾಜರಿದ್ದರು.

- ಹೆಚ್.ಕೆ.ಜಗದೀಶ್