*ಸಿದ್ದಾಪುರ, ಏ. 3: ಕೊರೊನಾ ಸೋಂಕು ಹರಡದಂತೆ ರಾಜ್ಯ ವ್ಯಾಪಿ ಲಾಕ್‍ಡೌನ್ ಘೋಷಣೆಯಾದ ನಂತರದ ಪರಿಸ್ಥಿತಿ ಕಾರ್ಮಿಕ ವರ್ಗವನ್ನು ಅತಂತ್ರ ಗೊಳಿಸಿದೆ. ಈ ರೀತಿ ಅಸಹಾಯಕ ಸ್ಥಿತಿಗೆ ಸಿಲುಕಿದ ಅನೇಕ ಕಾರ್ಮಿಕರು ಜಿಲ್ಲೆಯಲ್ಲೂ ಇದ್ದಾರೆ. ಕರಿಮೆಣಸು ಕೊಯ್ಯಲೆಂದು ಅಭ್ಯತ್‍ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್‍ಗೆ ಬಂದಿದ್ದ ಕೊಳ್ಳೆಗಾಲದ ಸುಮಾರು 40 ಮಂದಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ತೋಟದಲ್ಲೇ ಉಳಿದುಕೊಂಡಿದ್ದರು. ಈ ಕಾರ್ಮಿಕರನ್ನು ಕರೆ ತಂದಿದ್ದ ಕೊಳ್ಳೆಗಾಲದ ಮೇಸ್ತ್ರಿ ಅಲ್ಲಿನ ಕಾರ್ಮಿಕ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಲ್ಲಿನ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದು ಆಹಾರ ಸಾಮಗ್ರಿ ತಲುಪುವಂತೆ ನೋಡಿಕೊಂಡಿ ದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದಂತೆ ಆಹಾರ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಹಾರ ಸಾಮಗ್ರಿಗಳನ್ನು ಕಾರ್ಮಿಕರಿಗೆ ಒದಗಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ, ಇಲಾಖಾ ಸಿಬ್ಬಂದಿಗಳಾದ ರವಿ, ರೇವಣ್ಣ ಮತ್ತಿತರರು ಹಾಜರಿದ್ದರು.ಮಡಿಕೇರಿ : ಪುಟಾಣಿ ನಗರದಲ್ಲಿ ವಾಸವಾಗಿ ರುವ 36 ಮಂದಿ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ದಿನಸಿ ಮತ್ತು ಅಗತ್ಯ ಸಾಮಗ್ರಿಯನ್ನು ವಿತರಿಸಲಾಯಿತು. ತಹಶೀಲ್ದಾರ್ ಮಹೇಶ್, ತಾಲೂಕು ಕಾರ್ಮಿಕ ಅಧಿಕಾರಿ ಎಂ. ಎಂ ಯತ್ನಟ್ಟಿ ಇತರರು ಇದ್ದರು.* ಸಿದ್ದಾಪುರ : ಅಭ್ಯತ್‍ಮಂಗಲದ ಸಿಲ್ವರ್ ಎಸ್ಟೇಟ್‍ನಲ್ಲಿರುವ ಸುಮಾರು 16 ಕಾರ್ಮಿಕರಿಗೆ ಎಸ್ಟೇಟ್ ವ್ಯವಸ್ಥಾಪಕ ಈರಪ್ಪ ಅವರು ಆಹಾರ ಸಾಮಗ್ರಿ ಪೂರೈಸಿದ್ದಾರೆ. ಕಾರ್ಮಿಕರಿಗೆ ಆಹಾರ ನೀಡಲಾಗುತ್ತಿಲ್ಲ ಎಂದು ಈ ಹಿಂದೆ ತಪ್ಪು ಅಭಿಪ್ರಾಯ ಮೂಡಿಸಲಾಗಿತ್ತು. ಆದರೆ ಊಟದ ವ್ಯವಸ್ಥೆ ಮಾಡಿರುವ ಬಗ್ಗೆ ಗ್ರಾ.ಪಂ. ಕಾರ್ಯದರ್ಶಿ ರವಿ ಸ್ಥಳಕ್ಕೆ ಭೇಟಿ ನೀಡಿ ಖಾತ್ರಿ ಪಡಿಸಿಕೊಂಡಿ ದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಭಾಗದ ಕಾರ್ಮಿಕರೇ ಇದ್ದು, ಆಹಾರ ಸಾಮಗ್ರಿ ನೀಡುತ್ತಿಲ್ಲವೆಂದು ತಪ್ಪು ಮಾಹಿತಿ ನೀಡಿದ ಪರಿಣಾಮ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.*ಸಿದ್ದಾಪುರ : ಲಾಕ್‍ಡೌನ್ ಹಿನ್ನೆಲೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲಸಿದ್ದ ಹೊರ ರಾಜ್ಯದ ಕಾರ್ಮಿಕರಿಗೆ ಮಡಿಕೇರಿ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟಿ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಹೆಚ್. ಮೂಸಾ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರೇಮಾ, ಅಬ್ದುಲ್ ಶುಕೂರ, ಟಿ.ಹೆಚ್. ಮಂಜುನಾಥ, ಸಿದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮಾಭಿವೃದ್ಧಿ ಅಧಿಕಾರಿ ಕೆ.ಸಿ. ವಿಶ್ವನಾಥ ಮತ್ತು ಸಿಬ್ಬಂದಿ ಎಂ.ಎಂ. ಸುರೇಶ ದಿನಸಿ, ದಿನಬಳಕೆಯ ವಸ್ತುಗಳನ್ನು ನೀಡಿದ್ದಾರೆ. ಪಶ್ಚಿಮ ಬಂಗಾಳದ 9 ಜನ, ತಮಿಳುನಾಡಿನ 3, ದಾವಣಗೆರೆಯ 6 ಮತ್ತು ಮೈಸೂರು ರಸ್ತೆಯ ಓರ್ವ ವಯೋವೃದ್ಧೆ ಸೇರಿದಂತೆ ದಿನಗೂಲಿಗಾಗಿ ಜಿಲ್ಲೆಗೆ ಆಗಮಿಸಿದ್ದ 19 ಜನರಿದ್ದು, ಇದರಲ್ಲಿ 9 ಕಟ್ಟಡ ಕಾರ್ಮಿಕರು, 3 ಬೀದಿ ಬದಿ ವ್ಯಾಪಾರಸ್ಥರು, 6 ಕೂಲಿ ಕಾರ್ಮಿಕರು ಮತ್ತು 1 ವಯೋವೃದ್ಧೆ ಇದ್ದಾರೆ. ಇವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.