ಮಡಿಕೇರಿ, ಏ. 3: ಕೊಡಗು ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳಿಗೆ ಸ್ಪಂದಿಸಿರುವ ಜನತೆ; ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಕೇಂದ್ರಗಳಲ್ಲಿ ಹಾಗೂ ಇತರೆಡೆಗಳಲ್ಲಿ ತಮ್ಮ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟದಲ್ಲಿ ಸಮಸ್ಯೆಯಿಲ್ಲದೆ ವಹಿವಾಟಿನಲ್ಲಿ ತೊಡಗಿದ ದೃಶ್ಯ ಗೋಚರಿಸಿತು.ಮಡಿಕೇರಿಯಲ್ಲಿ ಒಂದಿಷ್ಟು ವಾಹನಗಳ ಓಡಾಟ ಎದುರಾದರೂ; ಎಲ್ಲಿಯೂ ತಾಲೂಕು ಕೇಂದ್ರಗಳಲ್ಲಿ ಹೆಚ್ಚಿನ ಜನದಟ್ಟಣೆ ಕಾಣಿಸಲಿಲ್ಲ; ಸೊಪ್ಪು ತರಕಾರಿ, ದಿನಸಿ ಪದಾರ್ಥ, ವೈದ್ಯಕೀಯ ಸೇವೆ, ಬ್ಯಾಂಕ್ ವ್ಯವಹಾರಗಳು ಶಾಂತಿಯುತವಾಗಿ ಮುಂದುವರೆದಿತ್ತು. ಈಗಾಗಲೇ ಗ್ರಾಮೀಣ ಭಾಗಗಳಿಗೆ ಪಡಿತರ ಹಾಗೂ ತರಕಾರಿ ಇತ್ಯಾದಿಗಳಿಗೆ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯವಸ್ಥೆ ಜಾರಿಗೊಳಿಸಿರುವ ಮೇರೆಗೆ; ಪಟ್ಟಣ ಪ್ರದೇಶಗಳಲ್ಲಿ ಈ ಹಿಂದಿನ ವಾರಗಳಂತೆ ಜನಜಂಗುಳಿ ಅಷ್ಟಾಗಿ ಕಂಡು ಬರಲಿಲ್ಲ; ಪೊಲೀಸ್ ಮೂಲಗಳ ಪ್ರಕಾರ ಕೂಡ ಎಲ್ಲೆಡೆ ಜನತೆ ಶಾಂತಿಯುತವಾಗಿ ತಮ್ಮ ತಮ್ಮ ಕೆಲಸಗಳನ್ನು ಪೂರೈಸಿಕೊಂಡು ಮಧ್ಯಾಹ್ನ ಹೊತ್ತಿಗೆ ಮನೆಗಳಿಗೆ ಮರಳಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಆಟೋರಿಕ್ಷಾಗಳ ಸಹಿತ ಇತರ ವಾಹನಗಳ ಅನಾವಶ್ಯಕ ಓಡಾಟಕ್ಕೆ ಪೊಲೀಸರು ಕಡಿವಾಣದೊಂದಿಗೆ; ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರು.
ಸ್ವಚ್ಛತೆಗೆ ಒತ್ತು : ಮಡಿಕೇರಿ ನಗರಸಭೆ ಇತರ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಹಕಾರದಿಂದ; ಸಂತೆ ವ್ಯವಹಾರ ಮುಗಿಯುತ್ತಿದ್ದಂತೆ ಔಷಧಿಗಳನ್ನು ಸಿಂಪಡಿಸುವ ಮೂಲಕ; ಕೊರೊನಾ ಸಹಿತ ಸಾಂಕ್ರಾಮಿಕ ರೋಗ ಹರಡದಂತೆ
(ಮೊದಲ ಪುಟದಿಂದ) ಕಾಳಜಿ ವಹಿಸಿದ್ದು; ಕಂಡು ಬಂತು. ಎಲ್ಲಾ ಸ್ವಚ್ಛತಾ ಸಿಬ್ಬಂದಿಗೆ ಕೈಕವಚ, ಗಂಬೂಟು, ಮುಖವಾಡ ವಸ್ತ್ರ ಸೇರಿದಂತೆ ಅಗತ್ಯ ನೆರವು ಕಲ್ಪಿಸಿದ್ದು; ಇಡೀ ನಗರದ ಸ್ವಚ್ಛತೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಎಂ.ಎಲ್. ರಮೇಶ್ ‘ಶಕ್ತಿ’ಯೊಂದಿಗೆ ತಿಳಿಸಿದರು.