ಕೆ.ಆರ್. ನಗರದಲ್ಲಿ ಲಘು ಭೂಕಂಪ
ಕೆ.ಆರ್. ನಗರ, ಏ. 3: ರಾಜ್ಯದ ಕೆ.ಆರ್. ನಗರ ಹಾಗೂ ಅರಕಲಗೂಡು ಮೊದಲಾದ ಕೆಲವು ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಭೂ ಸರ್ವೆಕ್ಷಣಾ ಇಲಾಖೆಯ ಮಾಜಿ ಡಿ.ಜಿ. ಡಾ. ಹೆಚ್.ಎಸ್.ಎಂ. ಪ್ರಕಾಶ್ ಅವರು ಖಾತರಿ ಪಡಿಸಿದ್ದಾರೆ. ಕಾವೇರಿ ನದಿ ತೀರದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವ ವಾಗಿರುವದಾಗಿಯೂ ಆ ಪ್ರದೇಶದ ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರ ಮೇಲೆ ಯುವಕರಿಂದ ಕಲ್ಲು ತೂರಾಟ
ಹುಬ್ಬಳ್ಳಿ, ಏ. 3: ದೇಶದಲ್ಲಿ ತಾ. 14 ರವರೆಗೆ ಲಾಕ್‍ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಿರುವುದನ್ನು ಲೆಕ್ಕಿಸಿದ ಯುವಕರು ಪೊಲೀಸರತ್ತ ಕಲ್ಲು ತೂರಾಟ ಮಾಡಿರುವ ಘಟನೆ ವರದಿಯಾಗಿದೆ. ಇಲ್ಲಿನ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ನಮಾಜ್ ಮಾಡುವ ವಿಷಯಕ್ಕೆ ಸಂಬಂಧಿಸಿದ್ದಂತೆ ಗಲಾಟೆ ನಡೆದಿದೆ. ಅಲ್ಲದೇ ಪೊಲೀಸರ ಮೇಲೆ ಸ್ಥಳೀಯ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದ್ದು, ಪ್ರತಿಯೊಂದು ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಜನಜಮಾವಣೆಯಿಂದ ನಮಾಜ್ ಮಾಡುತ್ತಿರುವ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದರು. ಇದೇ ವೇಳೆ ಮಾತಿನ ಚಕಮಕಿ ನಡೆದಿದೆ. ಯುವಕರು ಏಕಾಏಕಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್‍ಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
41 ದೇಶಗಳ 960 ಮಂದಿ ಭಾಗಿ
ನವದೆಹಲಿ, ಏ. 3: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವದ 41 ದೇಶಗಳಿಂದ 960 ಮಂದಿ ಭಾಗವಹಿಸಿರುವ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂಡೋನೇಷಿಯಾದಿಂದ (379) ಅತೀ ಹೆಚ್ಚು ಜನರು ಭಾಗವಹಿಸಿದ್ದರು. ಇನ್ನು ಬಾಂಗ್ಲಾದೇಶದಿಂದ 110, ಕಿರ್ಗಿಸ್ತಾನ (77), ಮಲೇಶಿಯಾ (75), ಥೈಲ್ಯಾಂಡ್ (65), ಮಯನ್ಮಾರ್ (63), ಶ್ರೀಲಂಕಾ (33), ಇರಾನ್ (24), ಕಜಕಿಸ್ತಾನ (14), ವಿಯೆಟ್ನಾಂ (12) ಮತ್ತು ಫಿಲಿಫೈನ್ಸ್‍ನಿಂದ 10 ಮಂದಿ ಭಾಗವಹಿಸಿದ್ದರು. ಇದರ ಜೊತೆಗೆ ಇನ್ನು ಹಲವು ರಾಷ್ಟ್ರಗಳಿಂದ ನೂರಾರು ಮಂದಿ ಭಾಗವಹಿಸಿದ್ದರು.
7 ಉಗ್ರರನ್ನು ಬಂಧಿಸಿದ ಸೇನೆ
ಶ್ರೀನಗರ, ಏ. 3: ದೇಶಾದ್ಯಂತ ಲಾಕ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಲಾಗಿದ್ದು ಈ ನಡುವೆ ಉಗ್ರ ಚಟುವಟಿಕೆ ನಡೆಸಲು ಮುಂದಾಗಿದ್ದ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಮೇಲೆ ಭಾರತೀಯ ಸೇನಾ ಯೋಧರು ದಾಳಿ ನಡೆಸಿದ್ದು ನಾಲ್ವರು ಉಗ್ರರು ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ಸಮಾಜ ವಿದ್ರೋಹಿ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಅದನ್ನು ಸೇನೆಯ ಯೋಧರು ವಿಫಲಗೊಳಿಸಿದ್ದು ಏಳು ಮಂದಿಯನ್ನು ಬಂಧಿಸಿದ್ದಾರೆ. ಇದೇ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆ
ಚೆನ್ನೈ, ಏ. 3: ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವಿಶೇಷವಾಗಿ ತಮಿಳುನಾಡಿನಲ್ಲಿ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಮತ್ತೆ 102 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ ಬಹುತೇಕರು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ತಬ್ಲಿಘಿ ಜಮಾಅತ್ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ನಿನ್ನೆಯಷ್ಟೇ ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ತಬ್ಲಿಘಿ ಜಮಾಅತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 74 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಮತ್ತೆ 102 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ. ಜಮಾಅತ್ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗಿ ಎಂದು ತಮಿಳುನಾಡು ಸರ್ಕಾರ ಕರೆ ನೀಡಿದ ಹಿನ್ನೆಲೆ ರಾಜ್ಯದ 15 ಜಿಲ್ಲೆಗಳ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಮಿಳುನಾಡಿನಿಂದ ಸುಮಾರು 1500 ಮಂದಿ ದೆಹಲಿಯ ಜಮಾಅತ್ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದ್ದು, ತಮಿಳುನಾಡು ಸರ್ಕಾರ ಈ ಎಲ್ಲರನ್ನು ಗುರುತಿಸಿ, ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಜಮಾಅತ್ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 2,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ
ಬೆಂಗಳೂರು, ಏ. 3: ಸರ್ಕಾರ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಆರೋಗ್ಯ ಕಿಟ್‍ಗಳನ್ನು ಒದಗಿಸುತ್ತಿಲ್ಲ ಎಂಬ ವಿಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈ ಸಂಬಂಧ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಹೆಲ್ತ್ ಕಿಟ್ ವಿತರಿಸಬೇಕು. ಹೆಲ್ತ್ ಕಿಟ್ ವಿತರಿಸುವಾಗ ರಾಜಕೀಯ ತಲೆದೋರದಂತೆ ನಿಗಾವಹಿಸಬೇಕು. ಪಕ್ಷಪಾತಿಗಳಾಗಿ ಅಧಿಕಾರಿಗಳು ವರ್ತಿಸಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ವಿಷಯದಲ್ಲಿ ನೀಡಿರುವ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಶಪಥ ಮಾಡಿದ್ದಾರೆ. ಇಂದು ಮುಸ್ಲಿಂ ಮುಖಂಡರ ಸಭೆ ನಂತರ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ಸೇರಿದಂತೆ ದಿನವಿಡೀ ಸರಣಿ ಸಭೆ ನಡೆಸಿದರು.
ಪ್ರಾದೇಶಿಕ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ
ಬೆಂಗಳುರು, ಏ. 3: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೂ ಕೂಡಲೇ ಜಾಹೀರಾತು ಬಿಡುಗಡೆ ಮಾಡುವಂತೆ ವಾರ್ತಾ ಇಲಾಖೆಗೆ ಸೂಚಿಸಿದ್ದಾರೆ. ವಾರ್ತಾ ಭವನದ ಮಹಾತ್ಮಾ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ನೂತನವಾಗಿ ರೂಪಿಸಲಾಗಿರುವ ‘ದಾಸೋಹ’ ಕಂಟ್ರೋಲ್ ರೂಂಗೆ ಚಾಲನೆ ನೀಡಲಾಯಿತು. ಕೆಯುಡಬ್ಲ್ಯೂಜೆ ಮನವಿ ಬಗ್ಗೆ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಗಮನ ಸೆಳೆದ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಪತ್ರಿಕೆಗಳನ್ನು ನಡೆಸುವುದು ಕಷ್ಟವಿದೆ. ಈ ಕಷ್ಟದ ಹೊತ್ತಿನಲ್ಲಿ ಕರೊನಾ ಜಾಗೃತಿ ಸೇರಿದಂತೆ ಸರ್ಕಾರದ ಜಾಹೀರಾತು ಕೊಡುವಂತೆ ಆದೇಶಿಸಿದರು. ಸ್ಥಳದಲ್ಲಿಯೇ ಇದ್ದ ವಾರ್ತಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ವಾರ್ತಾ ಇಲಾಖೆಯ ಆಯುಕ್ತ ಸಿದ್ದರಾಮಪ್ಪ ಜಾಹೀರಾತು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ
ಲಾರಿ ಚಾಲಕನಾದ ರವಿ ಡಿ. ಚನ್ನಣ್ಣನವರ್
ಬೆಂಗಳೂರು, ಏ. 3: ಕರ್ನಾಟಕ ದಕ್ಷ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರು ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಭ್ರಷ್ಟ ಆರ್‍ಟಿಓ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಕರ್ನಾಟಕ-ತಮಿಳುನಾಡು ಗಡಿ ಭಾಗ ಅತ್ತಿಬೆಲೆಯಲ್ಲಿರುವ ಚೆಕ್‍ಪೋಸ್ಟ್‍ನಲ್ಲಿ ಲಾರಿ ಚಾಲಕನ ವೇಷದಲ್ಲಿ ತೆರಳಿದ್ದರು. ಈ ವೇಳೆ ಚೆಕ್‍ಪೋಸ್ಟ್‍ನಲ್ಲಿ ಹೋಮ್ ಗಾರ್ಡ್ ವಿವೇಕ್, ಆರ್‍ಟಿಓ ಬ್ರೇಕ್ ಇನ್‍ಪೆಕ್ಟರ್‍ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದೆ. ತಮಿಳುನಾಡಿನಿಂದ ಕರ್ನಾಟಕದ ಕಡೆಗೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಸಾರಿಗೆ ಅಧಿಕಾರಿಗಳಾದ ಕರಿಯಪ್ಪ ಮತ್ತು ಜಯಣ್ಣ ಅವರ ಮಾರ್ಗದರ್ಶನದಲ್ಲಿ ವಿವೇಕ್ ಎಂಬ ಹೋಮ್ ಗಾರ್ಡ್ ಸಿಬ್ಬಂದಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು. ತಾತ್ಕಾಲಿಕ ಪರ್ಮಿಟ್ ಕೊಡುವ ಹೆಸರಲ್ಲಿ 400-500 ರೂಪಾಯಿ ಹಣ ಪಡೆಯಲಾಗುತ್ತಿತ್ತು. ಈ ವೇಳೆ ರವಿ ಡಿ. ಚನ್ನಣ್ಣನವರ್ ಅವರು ಅಧಿಕಾರಿಗಳನ್ನು ಬಂಧಿಸಿದ್ದು ಅವರಿಂದ 12,350 ರೂಪಾಯಿಯನ್ನು ವಶಪಡಿಸಿಕೊಂಡಿದ್ದರು. ಸಾರಿಗೆ ಅಧಿಕಾರಿಗಳಾದ ಜಯಣ್ಣ ಮತ್ತು ಕರಿಯಪ್ಪ ಅವರನ್ನು ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಅಮಾನುತುಗೊಳಿಸಿದ್ದಾರೆ.