ಮಡಿಕೇರಿ, ಏ. 3: ಕೊರೋನಾ ದಿಂದಾಗಿ ಇಡೀ ದೇಶವೆ ಲಾಕ್ ಡೌನ್ ಆಗಿದೆ. ಇದರಿಂದ ದೇಶದ ಅನ್ನದಾತನ ಪರಿಸ್ಥಿತಿ ಹೇಳತೀರದಾಗಿದೆ. ಒಂದೆಡೆ ಪೇಟೆ ಪಟ್ಟಣಗಳಲ್ಲಿ ಹಣ್ಣು ತರಕಾರಿ ಸಿಗದೆ ದುಬಾರಿ ಬೆಲೆಕೊಟ್ಟು ಕೊಳ್ಳುವ ಸ್ಥಿತಿಯಿದ್ದರೆ ಇತ್ತ ಹಳ್ಳಿಗಳಲ್ಲಿ ರೈತ ಬೆಳೆದ ಹಣ್ಣು ತರಕಾರಿ ಸಾರಿಗೆ ವ್ಯವಸ್ಥೆಯಿಲ್ಲದೆ ಮತ್ತು ಬೆಲೆಯಿಲ್ಲದೆ ಕೊಳ್ಳುವವರಿಲ್ಲದೆ; ಸಾಲ ಸೋಲ ಮಾಡಿ ಹಾಕಿದ ಔಷಧ ಗೊಬ್ಬರದ ಹಣ ಬರುವುದಿರಲಿ, ಕೊಯ್ಲು ಮಾಡಿದ ಕೂಲಿಯೂ ಬರುವುದಿಲ್ಲದಂತಾಗಿದೆ. ಶನಿವಾರಸಂತೆ ಹೋಬಳಿ ಗಂಗನಹಳ್ಳಿಯ ರೈತ ಟಿ.ಆರ್. ಪುರುಷೋತ್ತಮ್ ಅವರು ಮೂರು ಎಕರೆಯಲ್ಲಿ ಬೆಳೆದ ಸಪೋಟ ಹಣ್ಣಾಗಿ ಮರದಲ್ಲಿ ಕೊಳೆಯುತ್ತಿದೆ. ಇತ್ತ ಕೊಯ್ಯಲು ಆಗುತ್ತಿಲ್ಲ. ಕೊಯ್ದರೆ ತೆಗೆದುಕೊಳ್ಳುವವರು ಇಲ್ಲ. ಬಂದವರಿಗೆ ಕೊಟ್ಟು ಉಳಿದುದೆಲ್ಲ ಅಲ್ಲೆ ಕೊಳೆತು ಅಪಾರ ಪ್ರಮಾಣದ ನಷ್ಟವುಂಟಾಗಿದೆ.