ಚೆಟ್ಟಳ್ಳಿ, ಏ. 3: ದೇಶದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿ ಹಾಗೂ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಬಾಗಿಲಿಗೆ ತಾಜಾ ತರಕಾರಿ ನೀಡುವ ಉದ್ದೇಶದಿಂದ ವರ್ತಕರ ಸಂಘದ ನಿಗದಿತ ಬೆಲೆಗಿಂತ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಪಂಚಾಯಿತಿ ಜನಮೆಚ್ಚುಗೆ ಗಳಿಸಿದೆ.
ಹುಣಸೂರು ಭಾಗದ ರೈತರಿಂದ ನೇರವಾಗಿ ಖರೀದಿಸಿ ತಂದು ತಾಜಾ ತರಕಾರಿಗಳನ್ನು ವಾಹನದಲ್ಲಿ ತುಂಬಿಸಿ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದೆ. ಅತಿ ಕಡಿಮೆ ಬೆಲೆಗೆ ಸಿಗುವ ತಾಜಾ ತರಕಾರಿಗಳನ್ನು ಗ್ರಾಮಸ್ಥರು ಮನೆಯ ಮುಂದೆಯೇ ಖರೀದಿ ಮಾಡುತ್ತಿರುವ ದೃಶ್ಯ ಕಂಡುಬಂದಿದ್ದು; ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ತರಕಾರಿ ಮಾರಾಟದ ವಾಹನಕ್ಕೆ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಚಾಲನೆ ನೀಡಿದರು .ಈ ಸಂದರ್ಭ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ರಾಂಬೊ ಯುವಕ ಸಂಘ ಹಾಗೂ ಸಿಬ್ಬಂದಿಗಳು ಸೇವಾಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಜಿಲ್ಲಾಡಳಿತ ವಾರದಲ್ಲಿ ಮೂರು ದಿನಗಳ ಕಾಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಜನಜಂಗುಳಿ ಯಾಗಿ ಅಂತರ ಕಾಯ್ದುಕೊಳ್ಳದೆ ಅಂಗಡಿಗಳ ಮುಂದೆ ಜಮಾಯಿಸು ವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಹಾಗೂ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರ ದೊಂದಿಗೆ ನೇರವಾಗಿ ಸಾರ್ವ ಜನಿಕರಿಗೆ ತರಕಾರಿಗಳನ್ನು ತಲುಪಿಸಲು ಮುಂದಾಗಿರುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.