ಸೋಮವಾರಪೇಟೆ, ಏ. 2: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ತರಕಾರಿ ಮತ್ತು ದಿನಸಿ ಸಾಮಗ್ರಿ ಗಳನ್ನು ಮಾರಾಟ ಮಾಡಲು ವರ್ತಕರು ಹೊರ ಜಿಲ್ಲೆಯಿಂದ ಭಾರೀ ಪ್ರಮಾಣದ ತರಕಾರಿ-ದಿನಸಿ ಗಳನ್ನು ತರುತ್ತಿದ್ದಾರೆ. ವಾರದ ಮೂರು ದಿನಗಳಲ್ಲಿ ಮಾತ್ರ ತರಕಾರಿ-ದಿನಸಿ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವದರಿಂದ ಪಟ್ಟಣ ದಲ್ಲಿರುವ ಅಂಗಡಿಗಳ ಮಾಲೀಕರು ಹಾಗೂ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮಂದಿ ಹಾಸನ, ಮೈಸೂರು, ಚನ್ನರಾಯಪಟ್ಟಣಗಳಿಂದ ಸಾಮಗ್ರಿಗಳನ್ನು ತರುತ್ತಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯಿಂದ ವಾಹನಕ್ಕೆ ಪರವಾನಗಿ ಪಡೆದು ಚೆಕ್‍ಪೋಸ್ಟ್ ಮೂಲಕ ಹೊರ ಜಿಲ್ಲೆಗೆ ತೆರಳಿ ಭಾರೀ ಪ್ರಮಾಣದ ತರಕಾರಿ-ದಿನಸಿ ಪದಾರ್ಥಗಳನ್ನು ತರಲಾಗು ತ್ತಿದೆ. ತಾ. 29ರ ಸೋಮವಾರದಂದು ಪಟ್ಟಣದಲ್ಲಿ ಸಾವಿರಾರು ಮಂದಿ ಗ್ರಾಹಕರು ವ್ಯಾಪಾರ ವಹಿವಾಟಿನಲ್ಲಿ ಭಾಗಿಯಾಗಿದ್ದು, ಬಸ್ ನಿಲ್ದಾಣ ದಲ್ಲಿಯೇ ಸಂತೆಯ ಚಿತ್ರಣ ಕಂಡು ಬಂದಿತ್ತು. ಇದರಿಂದಾಗಿ ಪಟ್ಟಣದ ವಿವಿಧ ವಾರ್ಡ್, ಗ್ರಾಮೀಣ ಪ್ರದೇಶ ಗಳಿಗೆ ವಾಹನಗಳ ಮೂಲಕ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಇದರಿಂದಾಗಿ ದಿನಸಿ ಸಾಮಗ್ರಿಗಳನ್ನು ದಾಸ್ತಾನು ಮಾಡಲು ವರ್ತಕ ಸಮುದಾಯ ಮುಂದಾಗಿದೆ.

ಆರ್‍ಎಂಸಿ ದರದಂತೆಯೇ ವಸ್ತುಗಳನ್ನು ಮಾರಾಟ ಮಾಡ ಬೇಕೆಂಬ ಷರತ್ತನ್ನು ವಿಧಿಸಿ ಪೊಲೀಸ್ ಇಲಾಖೆಯಿಂದ ಪರವಾನಗಿ ನೀಡಲಾಗುತ್ತಿದೆ. ಭಾರೀ ಪ್ರಮಾಣದ ತರಕಾರಿಗಳನ್ನು ದೂರದೂರುಗಳಿಂದ ಪಟ್ಟಣಕ್ಕೆ ತಂದು ದಾಸ್ತಾನಿರಿಸಿ ಮಾರಾಟ ಮಾಡಲಾಗುತ್ತಿದೆ. ನಿನ್ನೆ ಸಂತೆ ಆವರಣದಂತೆ ಗಿಜಿಗಿಡುತ್ತಿದ್ದ ಸೋಮವಾರಪೇಟೆ ಪಟ್ಟಣ ಇಂದು ಲಾಕ್‍ಡೌನ್‍ನಿಂದ ಸಂಪೂರ್ಣ ಸ್ತಬ್ಧವಾಗಿದ್ದರೂ ಆಗಾಗ್ಗೆ ವಾಹನಗಳ ಓಡಾಟ ಕಂಡುಬಂತು. ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದರೂ ಸಹ ಕೆಲವರು ಅನಾವಶ್ಯಕವಾಗಿ ಪಟ್ಟಣದಲ್ಲಿ ಓಡಾಡುತ್ತಿದ್ದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಮೀಸಲು ಪಡೆಯ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿಗಳು ಬೀಡುಬಿಟ್ಟಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದರೂ ಸಹ ಕೆಲವರ ಅನಗತ್ಯ ಓಡಾಟಕ್ಕೆ ಬ್ರೇಕ್ ಬೀಳಲಿಲ್ಲ.