ಮಡಿಕೇರಿ, ಏ. 2: ವರ್ಷಂಪ್ರತಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮನಿಗೆ ಚೈತ್ರ ಮಾಸದ ನವಮಿಯ ಈ ಶುಭದಿನದಂದು ವಿಶೇಷ ಪೂಜೆ, ಪ್ರಾರ್ಥನೆ, ಭಜನೆ ಸಂಕೀರ್ತನೆಯೊಂದಿಗೆ ಮೆರವಣಿಗೆಗಳು ಜರುಗುತ್ತಿತ್ತು. ಪ್ರಸ್ತುತ ಸಂದರ್ಭ ಕೊರೊನಾ ಸೋಂಕಿನ ಹಿನ್ನೆಲೆ ಸರಕಾರ ವಿಧಿಸಿರುವ ನಿರ್ಬಂಧದ ಪರಿಣಾಮ ದೇವಾಲಯ ಮಂದಿರಗಳಲ್ಲಿ ಆರಾಧನೆ ನಡೆಯಲಿಲ್ಲ. ಬದಲಾಗಿ ಸದ್ಭಕ್ತರು ಮನೆ-ಮನಗಳಲ್ಲಿ ಶ್ರೀ ರಾಮನಾಮ ಸ್ಮರಣೆಯೊಂದಿಗೆ ಹೆಸರು ಬೇಳೆ ಕೋಸಂಬರಿ, ಪಾನಕ ಸೇವಿಸಿ ಧನ್ಯತೆ ಮೆರೆಯುವಂತಾಯಿತು.ರಾಮನವಮಿಯ ಪ್ರಯುಕ್ತ ಇಲ್ಲಿನ ಆಂಜನೇಯ ಗುಡಿಯಲ್ಲಿ ರಾಮೋತ್ಸವ ಸಮಿತಿ ಏರ್ಪಡಿಸುತ್ತಿದ್ದ ವಾರ್ಷಿಕ ಕಾರ್ಯಕ್ರಮಗಳು ರದ್ದುಗೊಂಡಿತು. ವರ್ಷಂಪ್ರತಿ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ ನಗರ ಸಂಕೀರ್ತನೆ ಮೂಲಕ ಮಂಟಪ ಮೆರವಣಿಯೊಂದಿಗೆ ವಿಶೇಷ ಪೂಜೆ, ಕೋಸಂಬರಿ, ಪಾನಕ ಹಾಗೂ ಅನ್ನದಾನ ಸ್ಥಗಿತಗೊಂಡಿತು. ಮಾತ್ರವಲ್ಲದೆ ಭಾಗಮಂಡಲ, ಇರ್ಪು ರಾಮೇಶ್ವರ ಕ್ಷೇತ್ರ, ಕಣಿವೆ ಹಾಗೂ ಇಲ್ಲಿನ ಪೇಟೆ ಶ್ರೀ ರಾಮಮಂದಿರ, ಸುಂಟಿಕೊಪ್ಪ, ಮೂರ್ನಾಡು, ನಾಪೋಕ್ಲು ಇತರೆಡೆಗಳಲ್ಲಿನ ಎಲ್ಲ ಶ್ರೀ ರಾಮೋತ್ಸವ ಕಾರ್ಯಕ್ರಮಗಳು ರದ್ದುಗೊಂಡಿದ್ದವು.

ಕೂಡಿಗೆ : ಶ್ರದ್ಧಾಭಕ್ತಿಯಿಂz ಸಾವಿರಾರು ಜನರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದ ರಾಮನವಮಿಯ ಹಬ್ಬ ಇಂದು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ 5 ಜನರ ಸಮ್ಮುಖದಲ್ಲಿ ಆಚರಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ. ಎನ್. ಸುರೇಶ್ ಸೇರಿದಂತೆ 4 ಜನ ಆಡಳಿತ ಮಂಡಳಿಯವರು ಇದ್ದರು.