ಮಡಿಕೇರಿ, ಏ. 2: ಕೊರೊನಾ ಸೋಂಕಿನ ಬಗ್ಗೆ ಅರಿವು ಕೂಡ ಇಲ್ಲದೆ ಅಸಹಾಯಕತನದಲ್ಲಿ ನಗರದ ಹಾಪ್‍ಕಾಮ್ಸ್ ಎದುರು ಸುಮಾರು 105 ವರ್ಷದ ವೃದ್ಧೆ ಕುಳಿತಿದ್ದು ಇಂದು ಬೆಳಿಗ್ಗೆ ಕಂಡುಬಂದಿತು. ಇವರನ್ನು ವಿಚಾರಿಸಿದಾಗ ಈಕೆಯು ತನ್ನ ಸ್ವಂತ ಊರಾದ ನಂಜನಗೂಡಿಗೆ ತೆರಳಲು ಬಯಸಿದರು. ಜನರು ಓಡಾಡದೇ ಸ್ತಬ್ಧವಾಗಿದ್ದ ನಗರದ ದೃಶ್ಯ ಹಾಗೂ ಬಸ್‍ಗಳ ಸಂಚಾರ ಸ್ಥಗಿತದ ಪ್ರಶ್ನೆ ಈಕೆಯನ್ನು ಕಾಡುತ್ತಿತ್ತು.ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಅಂತೊಣಿ ಜೋಸೆಫ್ ಭೇಟಿ ನೀಡಿ ತಮಗೆ ಪರಿಚಯವಿದ್ದ ಮೇಕೇರಿ ನಿವಾಸಿಗೆ ಕರೆ ಮಾಡಿ ವೃದ್ಧೆಯ ಛಾಯಾಚಿತ್ರವನ್ನು ಕಳುಹಿಸಿದಾಗ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆಯ ತಾಯಿಯೆ ಈ ವೃದ್ಧೆ ಎಂದು ದೃಢವಾಯಿತು. ವೃದ್ಧೆಯ ಮಗಳು ಹಾಗೂ ಅಳಿಯ ಮೇಕೇರಿಯಿಂದ ನಗರಕ್ಕೆ ಆಟೋರಿಕ್ಷಾದಲ್ಲಿ ಬಂದು ಇವರನ್ನು ಮನೆಗೆ ಕರೆದೊಯ್ದರು. ಈ ಸಂದರ್ಭ ಗಾಳಿಬೀಡು ಗ್ರಾ.ಪಂ. ಸದಸ್ಯ ಗಣೇಶ್ ವೃದ್ಧೆಗೆ ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಅಳವಡಿಸಿದರು.

ವೃದ್ಧೆಯು ನಂಜನಗೂಡಿನ ತನ್ನ ಮಗನ ಮನೆಯಲ್ಲಿ ವಾಸವಿದ್ದು, ಆಕೆಯನ್ನು ಅಲ್ಲಿ ಸರಿಯಾಗಿ ನೋಡಿಕೊಳ್ಳದ ಕಾರಣ ಮೇಕೇರಿಯ ತಮ್ಮ ಮಗಳ ಮನೆಯಲ್ಲಿ ಕಳೆದ 5 ತಿಂಗಳಿಂದ ವಾಸವಿದ್ದರು. ಇಂದು ಬೆಳಿಗ್ಗೆ ಮನೆಯವರು ಸೌದೆ ಕೆಲಸಕ್ಕೆಂದು ಹೊರಗೆ ತೆರಳಿದಾಗ, ವೃದ್ಧೆಯು ಮನೆಯಿಂದ ಸುಮಾರು 1 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ನಂತರ ಯಾವುದೋ ವಾಹನವೊಂದನ್ನು ನಿಲ್ಲಿಸಿ ನಂಜನಗೂಡಿಗೆ ಹೋಗಲು ಬಯಸಿದ್ದಾರೆ. ವಾಹನ ಚಾಲಕನು ಈಕೆಯ ಅಸಹಾಯಕತನವನ್ನೂ ಲೆಕ್ಕಿಸದೆ ಈಕೆಯನ್ನು ಮಡಿಕೇರಿ ಬಸ್ ತಂಗುದಾಣದ ಬಳಿ ಇಳಿಸಿ ಹೋಗಿದ್ದರು. ಅಸಹಾಯಕತೆಯಿಂದ ಪರಿತಪಿಸುತ್ತಿದ್ದ ವೃದ್ಧೆಗೆ ಇದೀಗ ತನ್ನ ಮಗಳ ಮನೆ ತಲುಪಿದ ನೆಮ್ಮದಿ ದೊರಕಿದೆ.