ನಾಪೋಕ್ಲು, ಏ. 2: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾರದ ಮೂರು ದಿನ ದಿನಸಿ ಹಾಗೂ ತರಕಾರಿಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು ನಾಪೋಕ್ಲು ಪಟ್ಟಣದಲ್ಲಿ ಬುಧವಾರ ನಿರ್ಬಂಧಗಳನ್ನು ಸಡಿಲಿಸಲಾಗಿದ್ದ ಹಿನ್ನೆಲೆಯಲ್ಲಿ ದಿನಸಿಗಳ ಖರೀದಿಗೆ ಜನ ಮುಂದಾದರು. ಜನರ ಓಡಾಟ ವಿರಳವಾಗಿತ್ತು. ತರಕಾರಿ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ತಂದು ವ್ಯಾಪಾರಕ್ಕೆ ಸಿದ್ದವಾಗಿದ್ದರೂ ಗ್ರಾಹಕರ ಕೊರತೆಯಿಂದ ನಿಧಾನಗತಿಯ ವ್ಯಾಪಾರ ಕಂಡುಬಂತು. ಗ್ರಾಮಪಂಚಾಯಿತಿ ವತಿಯಿಂದ ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡದಂತೆ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ಕೊಡುತ್ತಿದ್ದರೂ ವ್ಯಾಪಾರಿಗಳು ಅದನ್ನು ಲೆಕ್ಕಿಸದೆ ತರಕಾರಿ ವ್ಯಾಪಾರ ಮಾಡಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವರ್ತಕರ ಸಭೆಯಲ್ಲಿ ಗ್ರಾಮಪಂಚಾಯಿತಿ ಪಿಡಿಓ ಚೋಂದಕ್ಕಿ ಮಾತನಾಡಿ ತರಕಾರಿ ದಿನಸಿ ವಸ್ತುಗಳು ಹಾಗೂ ಹಾಲಿನ ದರ ಹೆಚ್ಚಳದ ಬಗ್ಗೆ ಜನರಿಂದ ದೂರುಗಳು ಬಂದಿವೆ. ದರ ಹೆಚ್ಚಿಸದಂತೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಸಂತೆಯ ದಿನವಾದ ಸೋಮವಾರ ಪಟ್ಟಣದಲ್ಲಿ ಜನದಟ್ಟಣೆ ಏರ್ಪಟ್ಟಿತ್ತು. ನಾಪೋಕ್ಲು ಹೋಬಳಿ ಮಾತ್ರವಲ್ಲದೆ ಬೆಟ್ಟಗೇರಿ, ಚೇರಂಬಾಣೆ,ಭಾಗಮಂಡಲ ಭಾಗ ಗಳಿಂದಲೂ ಜನರು ಆಗಮಿಸಿ ಜನಜಂಗುಳಿ ಏರ್ಪಟ್ಟಿತ್ತು. ಆ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಮನೆಮನೆಗೆ ದಿನಸಿಗಳನ್ನು ತಲುಪಿಸಲು ಕ್ರಮಕೈಗೊಳ್ಳುವಂತೆ ಯೋಜಿಸಲಾಗಿತ್ತು. ಅಂಗಡಿ ಮಾಲೀಕರು ಸ್ಪಂದಿಸುವುದಾಗಿ ಹೇಳಿದ್ದಾರೆ ಎಂದರು. ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಎ.ಎಸ್.ಐ. ದೇವರಾಜ್, ಗ್ರಾಮಪಂಚಾಯಿತಿ ಸದಸ್ಯರಾದ ಖುರೇಶಿ, ಕುಶು ಕುಶಾಲಪ್ಪ, 5 ವರ್ತಕರು ಪಾಲ್ಗೊಂಡಿದ್ದರು.
ಲಾಕ್‍ಡೌನ್ ಹಿನ್ನೆಲೆ ಬಗ್ಗೆ ಪ್ರಸ್ತಾಪಿಸಿದ ಸ್ಥಳೀಯ ವೈದ್ಯ ಡಾ. ಸಣ್ಣುವಂಡ ಕಾವೇರಪ್ಪ ಮಾತನಾಡಿ ಔಷಧಿ ಅಂಗಡಿಗಳಲ್ಲಿ ಔಷಧಿಗಳ ಕೊರತೆ ಕಂಡುಬಂದಿದೆ. ಔಷಧಿ ಸರಬರಾಜು ಮಾಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. ಕೊರೊನಾ ಸೋಂಕಿನ ತೀವ್ರತೆಯನ್ನು ಮನಗಂಡು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್, ಜಿಲ್ಲಾಡಳಿತ ಉತ್ತಮ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು. ನಗರದ ಅಂಗಡಿಗಳ ವ್ಯವಸ್ಥೆ ಮತ್ತು ಸ್ವಚ್ಛತೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ ಕರುಂಬಮ್ಮಯ್ಯ, ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಪಿಡಿಓ ಚೋಂದಕ್ಕಿ ಪರಿಶೀಲಿಸಿದರು. - ದುಗ್ಗಳ