ಶನಿವಾರಸಂತೆ, ಏ. 2: ಗೌಡಳ್ಳಿ ಗ್ರಾಮದ ಕಾಫಿ ತೋಟಕ್ಕೆ ವಿದ್ಯುತ್ ಕಂಬದ ವಯರ್‍ಗೆ ಮರದ ಕೊಂಬೆ ತಾಗಿ ಬೆಂಕಿ ಹತ್ತಿಕೊಂಡು ಕಾಫಿ ತೋಟಕ್ಕೆ ಬೆಂಕಿ ಬಿದ್ದು ನಷ್ಟ ಉಂಟಾಗಿದೆ. ಗೌಡಳ್ಳಿ ಗ್ರಾಮದ ಕೆ.ಎಸ್. ಶಾಂತಮಲ್ಲಪ್ಪ ಅವರಿಗೆ ಸೇರಿದ ಒಂದು ಎಕರೆ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಸುಮಾರು 200 ಕಾಫಿ ಗಿಡ, ಫಸಲು ಭರಿತ ಕರಿ ಮೆಣಸು ಬಳ್ಳಿಗಳು, ಕಿತ್ತಳೆ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು, ನಷ್ಟ ಉಂಟಾಗಿದೆ. ಪಕ್ಕದಲ್ಲೆ ಇದ್ದ ಜಯಂತ್‍ಕುಮಾರ್, ರಾಮು, ಚೆನ್ನಪ್ಪ ಅವರುಗಳು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ವಿಚಾರ ತಿಳಿದ ಶಾಂತಮಲ್ಲಪ್ಪ ಅವರ ಪತ್ನಿ ರತ್ನಮ್ಮ ಅವರಿಗೆ ಶಾಕ್ ಆಗಿ ಆಸ್ಪತ್ರೆಗೆ ದಾಖಲಿಸಿದ್ದು, ನಷ್ಟ ಪರಿಹಾರಕ್ಕಾಗಿ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.