ಪೊನ್ನಂಪೇಟೆ, ಏ. 2: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು, ಕಡುಬಡವರು ಹಾಗೂ ನಿರ್ಗತಿಕರು ಊಟದ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಮಾರ್ಚ್ 29 ರಿಂದ ಪೊನ್ನಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿದೆ. ಪ್ರತಿದಿನ ಇನ್ನೂರು ಜನರಿಗೆ ಆಶ್ರಮದ ವತಿಯಿಂದ ಊಟವನ್ನು ನೀಡಲಾಗುತ್ತಿದ್ದು, ಕಾಟ್ರಕೊಲ್ಲಿ, ಕೃಷ್ಣನಗರ, ಶಿವಕಾಲೋನಿ, ಜನತಾ ಕಾಲೋನಿ ಸೇರಿದಂತೆ ಪೊನ್ನಂಪೇಟೆಯ ವಿವಿಧ ಬಡಾವಣೆಗಳ ಕಡುಬಡವರ ಮಧ್ಯಾಹ್ನದ ಹಸಿವು ನೀಗಿಸುವ ಕಾರ್ಯವನ್ನು ಆಶ್ರಮದ ವತಿಯಿಂದ ಮಾಡಲಾಗುತ್ತಿದೆ.

ಇಷ್ಟೇ ಅಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಕೆಇಬಿ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇಂದು ಮಧ್ಯಾಹ್ನದ ಊಟವನ್ನು ವಿತರಿಸಲಾಯಿತು. ಈ ಸಂದರ್ಭ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಮಹಾರಾಜ್, ಪರಹಿತನಂದಾ ಮಹಾರಾಜ್, ಗೋಪೇಂದ್ರನಂದಾ ಮಹಾರಾಜ್, ಸುಬಲ್ ಮಹಾರಾಜ್, ದೀಪಾಂಕರ್ ಮಹಾರಾಜ್, ಶರತ್, ಸಂತೋಷ್, ಮಹೇಶ್, ದರ್ಶನ್ ಇದ್ದರು.

ವೈದ್ಯಾಧಿಕಾರಿ ಸಲಹೆಯ ಮೇರೆಗೆ ಆಶ್ರಮದ ಆಸ್ಪತ್ರೆಯಲ್ಲಿ 2 ವಾರ್ಡ್ ಮೀಸಲಿರಿಸಲಾಗಿದೆ. ಏ. 3 ರಂದು (ಇಂದು) ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಪಡಿತರ ಕಾರ್ಡ್ ಇಲ್ಲದ ಕಾರ್ಮಿಕರ ಹಾಗೂ ನಿರ್ಗತಿಕರ ಪಟ್ಟಿಯನ್ನು ನಮಗೆ ನೀಡಲಾಗಿದ್ದು, ಅಂತಹವರಿಗೆ ಆಶ್ರಮದ ವತಿಯಿಂದ ಪಡಿತರ ಕಿಟ್ ನೀಡಲಾಗುವುದು ಎಂದು ಬೋಧಸ್ವರೂಪ ನಂದಾ ಮಹಾರಾಜ್ ಹೇಳಿದರು.