ಸೋಮವಾರಪೇಟೆ, ಏ. 2: ಕಳೆದ ಮಾ. 20ರಂದು ಮಂಗಳೂರಿ ನಿಂದ ಸೋಮವಾರಪೇಟೆಯ ಉಂಜಿಗನಹಳ್ಳಿಗೆ ಆಗಮಿಸಿ ಮಾ. 31 ರಂದು ಶೌಚಗೃಹದಲ್ಲಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಇಂದಿಗೂ ಆತಂಕ ದೂರವಾಗಿಲ್ಲ.

ತಾಲೂಕಿನ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಉಂಜಿಗನಹಳ್ಳಿಯ ನಿವಾಸಿ ಕೆ.ಎಂ. ಸೋಮಯ್ಯ ಮತ್ತು ಕೆ.ಎಸ್. ಪೊನ್ನಮ್ಮ ಅವರ ಪುತ್ರ ರೋಷನ್ (41) ಎಂಬವರ ನಿಧನದಿಂದಾಗಿ ಅಕ್ಕಪಕ್ಕದ ನಿವಾಸಿಗಳು ಹಾಗೂ ಗ್ರಾಮಸ್ಥರು ತಮ್ಮತಮ್ಮಲ್ಲೇ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಮಾ. 20ರಂದು ಬೈಕ್‍ನಲ್ಲಿ ಮಡಿಕೇರಿ, ಕುಶಾಲನಗರ ಮಾರ್ಗವಾಗಿ ಉಂಜಿಗನಹಳ್ಳಿಯ ಮನೆಗೆ ಬಂದಿದ್ದ ರೋಷನ್ ಅವರು ನಂತರದ ದಿನಗಳಲ್ಲಿ ಮಂಗಳೂರಿಗೆ ಹಿಂತಿರುಗಲಾಗದೇ ಮನೆಯಲ್ಲಿಯೇ ತನ್ನ ತಾಯಿಯೊಂದಿಗೆ ಉಳಿದಿದ್ದರು. ಮನೆಯಿಂದ ಹೊರಬರದೇ ಇದ್ದುದರಿಂದ ಅಕ್ಕಪಕ್ಕದ ನಿವಾಸಿಗಳು ಇವರ ಮೇಲೆ ಸಂಶಯದ ನೋಟ ಬೀರುತ್ತಿದ್ದರು. ಆದರೆ ಯಾವದೇ ರೋಗ ಲಕ್ಷಣಗಳು ಇಲ್ಲದೇ ಆರೋಗ್ಯವಾಗಿದ್ದ ರೋಷನ್ ಅವರು ಘಟನೆ ಸಂಭವಿಸುವದಕ್ಕೂ ಎರಡು ದಿನ ಮುಂಚೆ ನಿಶ್ಯಕ್ತಿಗೆ ಒಳಗಾಗಿದ್ದರು. ತಾ. 31ರಂದು ಶೌಚಾಲಯಕ್ಕೆ ತೆರಳಿದ್ದ ಸಂದರ್ಭ ಕೆಳಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. ಕೊರೊನಾ ಸೋಂಕು ಸಂಶಯದ ಹಿನ್ನೆಲೆ ಸ್ಥಳೀಯರು ನೆರವಿಗೆ ಧಾವಿಸಿರಲಿಲ್ಲ. ಇದೀಗ ಗ್ರಾಮಸ್ಥರು ರೋಷನ್ ಅವರ ಸಾವಿಗೆ ಸಂಬಂಧಿಸಿದಂತೆ ತಮ್ಮೊಳಗೆ ಚರ್ಚೆಗಳನ್ನು ನಡೆಸುತ್ತಿದ್ದು, ಸಾವಿಗೆ ನಿಖರ ಕಾರಣ ತಿಳಿದುಕೊಳ್ಳುವ ಧಾವಂತದಲ್ಲಿದ್ದಾರೆ.

ವೈದ್ಯಕೀಯ ಮೂಲಗಳ ಪ್ರಕಾರ ರೋಷನ್ ಅವರು ಶೌಚಗೃಹಕ್ಕೆ ತೆರಳಿದ ಸಂದರ್ಭ ನಿಶ್ಯಕ್ತಿಯಿಂದಾಗಿ ಕೆಳಬಿದ್ದು ತಲೆ ಭಾಗಕ್ಕೆ ಗಂಭೀರ ಸ್ವರೂಪದ ಪೆಟ್ಟಾಗಿದ್ದರಿಂದ ರಕ್ತಹೆಪ್ಪುಗಟ್ಟಿ ಸಾವನ್ನಪ್ಪಿರಬಹುದು. ಅಥವಾ ಹೃದಯಾಘಾತಕ್ಕೆ ಒಳಗಾಗಿ ಕೆಳಬಿದ್ದು ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಿದ್ದಾರೆ.

ಈ ಮಧ್ಯೆ ರೋಷನ್ ಅವರಲ್ಲಿ ಕೊರೊನಾಗೆ ಸಂಬಂಧಿಸಿದಂತಹ ಜ್ವರ, ಕೆಮ್ಮು ಸೇರಿದಂತೆ ಇನ್ನಿತರ ಯಾವದೇ ಲಕ್ಷಣಗಳು ಇರಲಿಲ್ಲ ಎಂಬದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆದರೂ ಸಹ ಘಟನೆಗೆ ನಿಖರ ಕಾರಣ ತಿಳಿದುಕೊಳ್ಳಲು ರೋಷನ್ ಅವರ ಮೃತದೇಹದ ಒಳಾಂಗಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅಲ್ಲಿಂದ ಸಂಬಂಧಿಸಿದ ವೈದ್ಯರಿಗೆ ವರದಿ ಬರಲಿದ್ದು, ಆ ವರದಿ ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳ ಕೈಸೇರಲಿದೆ. ನಂತರ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೇ ಅಧಿಕೃತ ಮಾಹಿತಿ ನೀಡಲಿದ್ದಾರೆ. ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.