ಹೆಬ್ಬಾಲೆ, ಏ. 1: ಗಡಿಗ್ರಾಮ ಅರೆಮಲೆನಾಡು ಬಯಲು ಸೀಮೆಯ ತೊರೆನೂರು ಗ್ರಾಮದಲ್ಲಿ ಕೊರೊನಾ ಭೀತಿ ಹಿನ್ನೆಲೆ ಯುಗಾದಿ ಹಬ್ಬದಂದು ರೈತರು ಹೊನ್ನರು ಉತ್ಸವವನ್ನು ಸರಳವಾಗಿ ಆಚರಿಸಿದರು.

ರೈತರ ಪಾಲಿಗೆ ಯುಗಾದಿ ಹೊಸ ಸಂವತ್ಸರವಾಗಿದ್ದು, ಅಂದು ಸಂಭ್ರಮ ಸಡಗರದಿಂದ ನೇಗಿಲು ಹೂಡುವ ಮೂಲಕ ಹೊನ್ನರು ಉತ್ಸವ(ಚಿನ್ನದ ಉಳುಮೆ)ಗೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ರೈತರು ಸಾಮೂಹಿಕವಾಗಿ ಉತ್ಸವ ಆಚರಿಸದೆ ತಮ್ಮ ತಮ್ಮ ಮನೆಗಳಲ್ಲಿ ದನ-ಕರುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಪೂಜಿಸಿದರು. ಅಲ್ಲದೆ ಮನೆಯಲ್ಲಿ ತಯಾರಿಸಿದ ಹೊಳಿಗೆ, ಪಾಯಸವನ್ನು ಜಾನುವಾರುಗಳಿಗೂ ನೀಡಿದರು.

ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ನೇತೃತ್ವದಲ್ಲಿ ಕೆಲವೇ ರೈತರು ತಮ್ಮ ಜಾನುವಾರುಗಳೊಂದಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ದೇವಾಲಯ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ವರ್ಷದ ಉಳುಮೆ ಹಾಗೂ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು. ಅಲ್ಲದೆ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ. ದೇಶಕ್ಕೆ ಬಂದಿರುವ ಗಂಡಾಂತರ ದೂರವಾಗಲಿ ಎಂದು ರೈತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.