ಪಾಲಿಬೆಟ್ಟ, ಮಾ. 31: ವಿಶ್ವದಾದ್ಯಂತ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸರ್ಕಾರ ಹಾಗೂ ಜಿಲ್ಲಾಡಳಿತ ಮೂಲಕ ನಡೆಯುತ್ತಿದ್ದು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರಿಗಳಿಗೆ ಮೂರು ದಿನಗಳ ಕಾಲ ಹಣ್ಣು, ಹಂಪಲು, ತರಕಾರಿ, ಸಾಮಗ್ರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆಯಾದರೂ ಕೆಲವು ವ್ಯಾಪಾರಿಗಳು ಹಣ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರಿಗೆ ಬೇಕಾದ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳ ಲೈಸನ್ಸ್ ರದ್ದುಪಡಿಸಿ ಬೀಗ ಜಡಿಯುವುದಾಗಿ ಗ್ರಾ.ಪಂ. ಎಚ್ಚರಿಕೆ ನೀಡಿದೆ.

ವ್ಯಾಪಾರಸ್ಥರು ಮಾಸ್ಕ್ ಹಾಗೂ ಗ್ಲೌಸ್‍ನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡಬೇಕಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಲು ಬಿಳಿ ಪೈಂಟ್‍ನಲ್ಲಿ 1 ಮೀಟರ್‍ನ ಅಂತರದಲ್ಲಿ ಬಾಕ್ಸ್‍ನ್ನು ಗುರುತಿಸಬೇಕಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಪೆÇಲೀಸ್ ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು ದುಬಾರಿ ಬೆಲೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ಜಿಲ್ಲಾಡಳಿತದ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ತೋಟದಲ್ಲಿರುವ ಕೂಲಿ ಕಾರ್ಮಿಕರು ಅನಾವಶ್ಯಕವಾಗಿ ಪಟ್ಟಣಕ್ಕೆ ಬಂದು ತಿರುಗಾಡಿಕೊಂಡು ಕಾಲಹರಣ ಮಾಡಿಕೊಂಡಿರುವುದು ಕಂಡುಬರು ತ್ತಿದೆ. ಇದರ ಬಗ್ಗೆ ತೋಟದ ಮಾಲೀಕರಿಗೆ ಪತ್ರರವಾನೆ ಮಾಡುವುದಾಗಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಸಭೆಯಲ್ಲಿ ತಿಳಿಸಿದರು.

ಪಾಲಿಬೆಟ್ಟ ಗ್ರಾಮದಲ್ಲಿ ಕೊರೊನಾ ವೈರಸ್ ತಡೆಯುವ ಬಗ್ಗೆ ಅಗತ್ಯ ಮುಂಜಾಗೃತಾ ಕ್ರಮಕೈಗೊಳ್ಳಲಾ ಗಿದ್ದು ಸಾರ್ವಜನಿಕರು ಗುಂಪು ಗುಂಪಾಗಿ ತೆರಳದೆ ಅಂತರಕಾಯ್ದು ಕೊಂಡು ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗಬೇಕು ಹಾಗೂ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಹಾಗೂ ರಸ್ತೆಯಲ್ಲಿ ತಿರುಗಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಉಪಠಾಣಾಧಿಕಾರಿ ಯೋಗೇಶ್ ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲಾಡಳಿತದ ಆದೇಶದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಸಿಕ್ಕಿದ ಹಿನ್ನೆಲೆಯಲ್ಲಿ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ವಸ್ತುಗಳನ್ನು ಕೊಂಡುಕೊಳ್ಳಲು ಮುಗಿ ಬಿದ್ದರು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣ ವಾಯಿತು. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದಂತವೈದ್ಯ ಜಗದೀಶ್, ಆಸ್ಪತ್ರೆಯ ದಾದಿ ಸಿ.ಬಿ.ರತಿ, ಅನಿತಾ, ಆಶಾ ಕಾರ್ಯಕರ್ತೆ ಶೈಲಾ, ಅಂಗನವಾಡಿ ಕಾರ್ಯಕರ್ತೆ ಮರಿಯಾ ಸೇರಿದಂತೆ ಮತ್ತಿತರರು ಉಪಸಿತರಿದ್ದರು.

- ಪುತ್ತಮ್ ಪ್ರದೀಪ್