ಶನಿವಾರಸಂತೆ, ಮಾ. 31: ಶನಿವಾರಸಂತೆ ಮತ್ತು ಕೊಡ್ಲಿಪೇಟೆ, ಕೊಡಗು - ಹಾಸನ ಜಿಲ್ಲೆಗಳ ಗಡಿಗ್ರಾಮಗಳಾಗಿದ್ದು; 4 ಚೆಕ್‍ಪೋಸ್ಟ್‍ಗಳ ಮೂಲಕವೇ ವಾಹನ ಸಂಚಾರ ಪ್ರವೇಶಕ್ಕೆ ಅವಕಾಶವಿದೆ. ಹಾಸನ, ಬೆಂಗಳೂರಿಗೆ ಹೋಗಲು ಹಾಗೂ ಬರಲು ಚೆಕ್‍ಪೋಸ್ಟ್ ಮೂಲಕವೇ ಸಾಗಬೇಕು.

ಶನಿವಾರಸಂತೆ ಪ್ರವೇಶಿಸಲು ಹಿಪ್ಪಲಿ ಗೇಟ್, ನಿಲುವಾಗಿಲು ಗೇಟ್, ಚಂಗಡಹಳ್ಳಿ ಗೇಟ್ ಹಾಗೂ ಶಾಂತಪುರಗೇಟ್‍ಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್ ನಿರ್ಮಾಣವಾಗಿವೆ. ಜಿಲ್ಲಾಡಳಿತ ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ದಿನದ 24 ಗಂಟೆಯಲ್ಲೂ ಚೆಕ್‍ಪೋಸ್ಟ್ ಬಳಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಸನ, ಬೆಂಗಳೂರು ಇತರ ಜಿಲ್ಲೆಗಳಿಂದ ವಾಹನಗಳಲ್ಲಿ ಬರುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆದರೂ ಕೆಲವರು ಒಳರಸ್ತೆಗಳನ್ನು ಹುಡುಕಿ ಗ್ರಾಮಗಳಿಗೆ ಬರುತ್ತಿದ್ದಾರೆ. ಆದ್ದರಿಂದ ಕೆಲ ಗ್ರಾಮಸ್ಥರು ತಮ್ಮ ಗ್ರಾಮದ ಭದ್ರತೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಒಳರಸ್ತೆಗಳಿಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನಿಟ್ಟು, ಬೇಲಿ ನಿರ್ಮಿಸಿ ದಿಗ್ಬಂಧನ ಮಾಡಿದ್ದಾರೆ. ಸೋಮವಾರಪೇಟೆ ವೃತ್ತನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣೆಯ ಪಿಎಸ್‍ಐ ಕೃಷ್ಣನಾಯಕ್, ಎಎಸ್‍ಐಗಳಾದ ಗೋವಿಂದ್, ಶಿವಲಿಂಗ, ಸಿಬ್ಬಂದಿ ಬೋಪಣ್ಣ, ಪ್ರದೀಪ್, ಲೋಕೇಶ್, ವಿನಯ್, ಚೆನ್ನಕೇಶವ, ರವಿಚಂದ್ರ, ಷಣ್ಮುಖನಾಯಕ್ ಮತ್ತಿತರರು ಇಲಾಖೆ ವಾಹನದಲ್ಲಿ ಎಲ್ಲೆಡೆ ಸಂಚರಿಸುತ್ತಾ ಕೊರೊನಾ ವೈರಸ್ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.