ಪೊನ್ನಂಪೇಟೆ, ಮಾ. 31: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ದ. ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಾರ್ವಜನಿಕರು ಅಗತ್ಯ ವಸ್ತುಗಳ ಕೊರತೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಅಲ್ಲಿನ ಜನರಿಗೆ ಸರಿಯಾದ ಸಮಯಕ್ಕೆ ದಿನಸಿ, ತರಕಾರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಸಲುವಾಗಿ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಈ ಪಂಚಾಯಿತಿ ವ್ಯಾಪ್ತಿಗೆ ಬರುವ ಟಿ.ಶೆಟ್ಟಿಗೇರಿ, ವೆಸ್ಟ್ ನೆಮ್ಮಲೆ, ಈಸ್ಟ್ ನೆಮ್ಮಲೆ, ತಾವಳಗೇರಿ, ಹರಿಹರ, ಚೀಪೆಕೊಲ್ಲಿ ಗ್ರಾಮಗಳ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೊರೈಸುವ ವಿನೂತನ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಮುಂದಾಗಿದ್ದಾರೆ.

ನಿಷೇದಾಜ್ಞೆ ಸಡಿಲಿಕೆಯ ಸಂದರ್ಭ ಅಂಗಡಿಗಳ ಮುಂದೆ ಜನದಟ್ಟಣೆಯನ್ನು ತಡೆಗಟ್ಟುವ ಸಲುವಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಯಿತು. ಗ್ರಾ.ಪಂ. ವ್ಯಾಪ್ತಿಗೆ ಸೇರುವ ಅಂಗಡಿಗಳ ಮಾಲೀಕರ ಜೊತೆ ಚರ್ಚಿಸಿ ದಿನ ಬಳಕೆಯ ವಸ್ತುಗಳನ್ನು ಗ್ರಾಹಕರ ಮನೆಬಾಗಿಲಿಗೆ ಗಾಡಿಗಳಲ್ಲಿ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಫೋನ್ ಕರೆ ಮಾಡಿ ಅಗತ್ಯವಿರುವ ದಿನಸಿ ಸಾಮಗ್ರಿಗಳ ಪಟ್ಟಿ, ಹೆಸರು ಹಾಗೂ ವಿಳಾಸವನ್ನು ವರ್ತಕರಿಗೆ ನೀಡಿದರೆ, ನಿಗದಿತ ದಿನ ನಿಗದಿತ ಸಮಯಕ್ಕೆ ನಿಷೇದಾಜ್ಞೆ ಸಡಿಲಿಕೆ ಇರುವ ದಿನಗಳಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಹಕರು ಅನಗತ್ಯವಾಗಿ ಅಂಗಡಿ ಮುಂದೆ ನಿಲ್ಲುವುದು ತಪ್ಪುತ್ತದೆ.

ಲಾಕ್ ಡೌನ್ ಅವಕಾಶವನ್ನು ಕೆಲವು ವರ್ತಕರು ದುರ್ಭಳಕೆ ಮಾಡಿಕೊಂಡು ದುಪ್ಪಟ್ಟು ಬೆಲೆಗೆ ದಿನಸಿ, ತರಕಾರಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪಂಚಾಯಿತಿ ವತಿಯಿಂದ ಅಂಗಡಿಗಳಿಗೆ ನೋಟೀಸ್ ನೀಡಿದ್ದು, ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಹೇಳಿದರು. ಈ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಅಗತ್ಯ ವಸ್ತು ಬೇಕಾದಲ್ಲಿ ಜಗತ್ 9481434635, ಸಂಜು 9481469767, ಸುಬ್ರಮಣಿ 9591257172, ಮಾಚಯ್ಯ 7760448959, ಪ್ರವೀಣ್ 9740998159 ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.