ಕೂಡಿಗೆ, ಏ. 1: ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮ ಸಮೀಪದಲ್ಲಿರುವ ಯಡವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ತಗಲಿದ್ದು ಅರಣ್ಯ ಹೊತ್ತಿ ಉರಿದಿದೆ.

ಯಡವನಾಡು ಮೀಸಲು ಅರಣ್ಯ ಪ್ರದೇಶವು ಸೋಮವಾರಪೇಟೆ ರಸ್ತೆಯ ಎರಡು ಕಡೆಗಳಲ್ಲಿ ಇದೆ. ಏಕ ಕಾಲದಲ್ಲಿ ಯಡವನಾಡು ಪೂರ್ವ ಮತ್ತು ಪಶ್ಚಿಮ ಭಾಗ ಕಾಡುಗಳಲ್ಲಿ ಬೆಂಕಿಯ ಹೂಗೆ ಕಾಣುತ್ತಿದ್ದಂತೆ ಸಿಬ್ಬಂದಿಗಳು ತೆರಳುವಷ್ಟರಲ್ಲಿ ಸುಡು ಬಿಸಿಲಿನ ಗಾಳಿಗೆ ಧಗ ಧಗನೇ ಉರಿಯಲು ಪ್ರಾರಂಭಿಸಿದೆ. ಬೆಂಕಿ, ಗಾಳಿಯ ರಭಸಕ್ಕೆ 300ಕ್ಕೂ ಹೆಚ್ಚು ವಿಸ್ತೀರ್ಣ ಪ್ರದೇಶ ಬೆಂಕಿಗೆ ಆಹುತಿ ಆಗಿದೆ. ಅರಣ್ಯದ ಸಮೀಪದಲ್ಲಿ ಸಜ್ಜಳ್ಳಿ ಹಾಡಿ ಮತ್ತು ಪೂರ್ವ ಭಾಗದಲ್ಲಿ ಯಡವನಾಡು ಹಾಡಿಗಳು ಇವೆ. ಹಾಡಿ ಪಕ್ಕದಲ್ಲಿ ಬೆಂಕಿ ಉರಿಯುತ್ತಿದ್ದ ಸಂದರ್ಭದಲ್ಲಿ ಹಾಡಿ ಸಮೀಪಕ್ಕೆ ಬರದಂತೆ ಹುದುಗೂರು ಗ್ರಾಮದ ನೂರಾರು ಯುವಕರು ಎರಡು ಹಾಡಿಗಳ ಹತ್ತಿರ ನೋಡಿಕೊಂಡು ಅರಣ್ಯ ಇಲಾಖೆಯವರಿಗೆ ಸಹಕರಿಸಿದರು.ಬೆಂಕಿ ನಂದಿಸಲು ಪ್ರಯತ್ನ : ಬೆಂಕಿ ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆಯವರು ಕುಶಾಲನಗರ ಮತ್ತು ಸೋಮವಾರಪೇಟೆ ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದು, ಅಗ್ನಿ ಶಾಮಕ ದಳದವರು ಬಂದರೂ ಅರಣ್ಯದ ಒಳಗೆ ಹೋಗಿ ನಂದಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ರಸ್ತೆಯ ಎರಡು ಕಡೆಯಿಂದ ಹಾಡಿಗೆ ಗಾಳಿ ಬೀಸುವ ಬೆಂಕಿ ಕಿಡಿಯನ್ನು ತಪ್ಪಿಸಲು ಯಶಸ್ವಿಯಾದರು. ಅಗ್ನಿಶಾಮಕ ದಳದವರು ಅವರ

(ಮೊದಲ ಪುಟದಿಂದ) ವಾಹನದಲ್ಲಿ ನೀರು ಖಾಲಿ ಅದ ನಂತರ ಸಮೀಪದ ಯಡವನಾಡು ಅರಸ್ ಎಂಬವರ ಮನೆ ಹತ್ತಿರದಿಂದ ನಾಲ್ಕು ಬಾರಿ ನೀರನ್ನು ತುಂಬಿಸಿಕೊಂಡು ರಸ್ತೆ ಬದಿ ಬೆಂಕಿ ಆರಿಸಿದರು.

ಯಡವನಾಡು ಪಶ್ಚಿಮ ಭಾಗದ ಅರಣ್ಯ, ಸಜ್ಜಳ್ಳಿ ಹಾಡಿ ಮತ್ತು ಐಗೂರು ಸಮೀಪದ ಕಾಜೂರು ವ್ಯಾಪ್ತಿಯವರೆಗೆ ಇದೆ. ಅಲ್ಲಿಯವರೆಗೂ ಬೃಹತ್ ಮರಗಳು ಸೇರಿದಂತೆ ಬಿದಿರಿನ ಪೊದೆಗಳು ಬೆಂಕಿಯಲ್ಲಿ ಆಹುತಿಯಾಗಿವೆ.

ಯಡವನಾಡು ಮೀಸಲು ಪ್ರದೇಶಗಳಲ್ಲಿ ಏಕ ಕಾಲದಲ್ಲಿ ಎಂಟು ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ. ಯಾರೊ ಕಿಡಿಗೇಡಿಗಳ ಕೈವಾಡ ಇದೆ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮಾನವಾಗಿದೆ.

ಬೆಂಕಿಗೆ ಆಹುತಿಯಾದ ಪ್ರದೇಶಕ್ಕೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಭಾಕರನ್ ಭೇಟಿ ನೀಡಿ ಪರಿಶೀಲಿಸಿದರು. ಕಿಡಿಗೇಡಿಗಳ ಬಗ್ಗೆ ಅನುಮಾನ ಇದ್ದರೆ ಹೆಸರು ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೆಬ್ಬಾಲೆ, ಬಾಣವಾರ ಮತ್ತು ಸೋಮವಾರಪೇಟೆ ವಿಭಾಗದ ನೂರಾರು ಅರಣ್ಯ ಸಿಬ್ಬಂದಿಗಳು ಆಗಮಿಸಿ ಬೆಂಕಿ ಬೇರೆಡೆ ಹರಡÀದಂತೆ ಶ್ರಮ ವಹಿಸಿದರು.

ಕಣ್ಣಿರಿಟ್ಟ ಅಧಿಕಾರಿ : ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡಿದಾಗ ನಂದಿಸಲು ಎಷ್ಟೆ ಪ್ರಯತ್ನ ಮಾಡಿದರೂ ಹೊತ್ತಿ ಉರಿಯುವಾಗ ನಂದಿಸಲು ಇಲಾಖೆಗೆ ಸಾಧ್ಯವಾಗಲಿಲ್ಲ ಎಂದು ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಶಮ ಕಣ್ಣಿರಿಟ್ಟರು.

- ಕೆ.ಕೆ. ನಾಗರಾಜಶೆಟ್ಟಿ.