ಮಡಿಕೇರಿ, ಏ. 1: ಪ್ರಸ್ತುತ ಕೊರೊನಾದ ಕಾರಣದಿಂದಾಗಿ ಜಿಲ್ಲೆಯ ರೈತರುಗಳಿಗೆ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿರುವದರಿಂದಾಗಿ ರೈತರಿಗೆ ಸಹಾಯ ಮಾಡಲು ಜಿಲ್ಲಾ ಕೇಂದ್ರ ಬ್ಯಾಂಕ್ನಿಂದ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಜಿಲ್ಲೆಯ ಸಹಕಾರ ಸಂಘಗಳಿಗೆ ಶೇ. 10.25ರ ಬಡ್ಡಿ ದರದಲ್ಲಿ ಈಗಿನ ಸಾಲ ನೀಡುವ ಮೂಲಕ ರೈತರು ಬೆಳೆದ ಉತ್ಪನ್ನಗಳ ಆಧಾರದಲ್ಲಿ ಸಾಲ ಪಡೆಯಲು ಅನುಕೂಲ ಕಲ್ಪಿಸುವಂತೆ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದರಂತೆ ಎಲ್ಲಾ ಸಹಕಾರ ಸಂಘಗಳು ಜಿಲ್ಲೆಯ ರೈತರುಗಳ ಹಿತದೃಷ್ಟಿಯಿಂದ ಅವರು ಬೆಳೆದ ಉತ್ಪನ್ನಗಳನ್ನು ಆಧಾರ ಮಾಡಿ (ಕಾಫಿ ಚೀಲವೊಂದಕ್ಕೆ ರೂ. 2 ಸಾವಿರ ಮತ್ತು ಕರಿಮೆಣಸು ಕೆ.ಜಿ.ಗೆ ರೂ. 150) ಸಾಲವನ್ನು ನೀಡಲು ಸೂಚಿಸಲಾಗಿದೆ. ಸಹಕಾರ ಸಂಘಗಳು ರೈತರುಗಳಿಗೆ ಈಡಿನ ಸಾಲ ನೀಡಲು ಹಣಕಾಸಿನ ಕೊರತೆ ಇದ್ದಲ್ಲಿ ಜಿಲ್ಲಾ ಕೇಂದ್ರಬ್ಯಾಂಕ್ನಿಂದ ಸಾಲವನ್ನು ಪಡೆಯಬಹುದೆಂದು ಡಿಸಿಸಿನ ಬ್ಯಾಂಕ್ ಪ್ರಕಟಣೆಯ ಮೂಲಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಮಾಹಿತಿ ನೀಡಿದೆ.