ಮಡಿಕೇರಿ, ಏ. 1: ಹೊರ ರಾಜ್ಯ ಹಾಗೂ ಉತ್ತರ ಕರ್ನಾಟಕ ಮಂದಿಯನ್ನು ಒಳಗೊಂಡಂತೆ; ದಾವಣಗೆರೆ ಮೂಲದ ಲಾರಿಯೊಂದರ ಸಹಿತ; 67 ಮಂದಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಮಿಕರನ್ನು ಲಾರಿಯಲ್ಲಿ ಸಿದ್ದಾಪುರ ವ್ಯಾಪ್ತಿಯ ತೋಟವೊಂದರಿಂದ ತುಂಬಿಸಿಕೊಂಡು; ಉತ್ತರ ಕರ್ನಾಟಕದ ಬಾಗಲಕೋಟೆಗೆ ಸಾಗಿಸುತ್ತಿದ್ದುದಾಗಿ ಲಾರಿ ಚಾಲಕ ಯತಿರಾಜ್ ಹೇಳಿಕೊಂಡಿದ್ದಾನೆ.ತಾನು ಕುಶಾಲನಗರದ ಇಟ್ಟಿಗೆ ಗೂಡೊಂದಕ್ಕೆ ಕಲ್ಲಿದ್ದಲು ತಂದಿದ್ದು; ಈ ಲಾರಿ ಹಿಂತೆರಳುವಾಗ ಕಾರ್ಮಿ ಕರನ್ನು ಕರೆದೊಯ್ಯಲು ಸಿದ್ದಾಪುರಕ್ಕೆ ಹೋಗಿ; ವಾಹನಕ್ಕೆ ತುಂಬಿಸಿಕೊಂಡು ಹಿಂತಿರುಗುತ್ತಿದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇಂದು ಬೆಳಿಗ್ಗೆ ಸಂಪಿಗೆಕಟ್ಟೆ ಬಳಿ ನಗರ ಪೊಲೀಸರು (ಕೆಎ-02-ಎಡಿ-2583) ಲಾರಿಯನ್ನು ತಡೆದ ಪೊಲೀಸರು, ತಹಶೀಲ್ದಾರ್ ಮಹೇಶ್ ಸಮಕ್ಷಮದಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಲಾರಿಯಲ್ಲಿದ್ದ 28 ಪುರುಷರು ಹಾಗೂ 26 ಮಹಿಳೆಯರ ಸಹಿತ 13 ಮಕ್ಕಳನ್ನು ಜಿಲ್ಲಾಡಳಿತದಿಂದ ಕಾಯ್ದಿರಿಸಿದ ಕ್ವಾರಂಟೈನ್‍ನಲ್ಲಿ ಸೇರಿಸುವ ಮೂಲಕ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪೊಲೀಸ್ ಕಾಯ್ದೆ 188, 269 ಹಾಗೂ ಪ್ರಾಕೃತಿಕ ವಿಕೋಪ ತಡೆ ಕಾಯ್ದೆ 51(ಬಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಕೊಳ್ಳಲಾಗಿದೆ. ಕೊರೊನಾ ಸಂಬಂಧ ಜಿಲ್ಲಾಡಳಿತ ನಿಯಂತ್ರಣ ಹೇರಿದ್ದು ಇದನ್ನು ಉಲ್ಲಂಘಿಸಿ ಲಾರಿಯಲ್ಲಿ ಕಾರ್ಮಿರನ್ನು ಸಾಗಿಸುತ್ತಿದ್ದ ಮೇರೆಗೆ ಸಂಬಂಧಿಸಿದ ಗುತ್ತಿಗೆದಾರ, ಮೇಸ್ತ್ರಿ, ತೋಟ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಸದಾಶಿವ ನೇತೃತ್ವದಲ್ಲಿ ಸಿಬ್ಬಂದಿಗಳು ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ., ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ನಗರ ಠಾಣೆಯ ಪೊಲೀಸರು; ಲಾರಿಯಲ್ಲಿದ್ದ ಎಲ್ಲಾ ಕಾರ್ಮಿಕರಿಗೆ ಇಲ್ಲಿನ ಸರಕಾರಿ ವಸತಿ ನಿಲಯವೊಂದರಲ್ಲಿ ಆಸರೆ ಕಲ್ಪಿಸಿ; ಆಹಾರ ಇತ್ಯಾದಿ ನೆರವು ಒದಗಿಸಿದೆ.

(ಮೊದಲ ಪುಟದಿಂದ)

ಜಿಲ್ಲಾಡಳಿತದಿಂದ ಆಸರೆ

“ತೋಟದ ಕೆಲಸ ಕೊರೊನಾ ಭೀತಿಯಿಂದ ಸ್ಥಗಿತಗೊಂಡ ಕಾರಣ ನಮಗೆ ಕೆಲಸವೂ ಇರಲಿಲ್ಲ, ಸಂಬಳವೂ ದೊರಕಿಲ್ಲ. ಇನ್ನು ಒಂದು ಹೊತ್ತಿನ ಊಟಕ್ಕೂ ತೊಂದರೆಯಾದ ಕಾರಣ ನಾವು ನಮ್ಮ ಊರಿಗೆ ಮರಳಿ ತೆರಳಲು ಹೊರಟೆವು,” ಎಂದು ಸಿದ್ದಾಪುರದ ಒಂದು ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓರ್ವ ಕಾರ್ಮಿಕ ರಾಮಾಚಾರಿ ‘ಶಕ್ತಿ’ಯೊಂದಿಗೆ ಮುಕ್ತ ನುಡಿಯಾಡಿದರು.

ಮೂಲತಃ ಬಳ್ಳಾರಿ ಜಿಲ್ಲೆಯವರಾದ ರಾಮಾಚಾರಿ ಸೇರಿದಂತೆ, ಬಳ್ಳಾರಿ ಮೂಲದ 67 ಮಂದಿ ಕಾರ್ಮಿಕರು ಸುಮಾರು ಮೂರು ವಾರದ ಹಿಂದೆ ಸಿದ್ದಾಪುರದ ತೋಟವೊಂದರಲ್ಲಿ ಕೆಲಸ ನಿರ್ವಹಿಸಲು ಬಂದರು. ಆದರೆ ಈಗ ಕೆಲಸ ಸ್ಥಗಿತಗೊಂಡ ಕಾರಣ, ತಿನ್ನಲು ಅನ್ನವೂ ದೊರಕದೆ ಬಳ್ಳಾರಿಗೆ ಹಿಂದಿರುಗುವ ಸಲುವಾಗಿ ಒಂದು ಲಾರಿ ಚಾಲಕನನ್ನು ಸಂಪರ್ಕಿಸಿ, ಗಂಟುಮೂಟೆ ಸಮೇತ ಈ ಲಾರಿಯಲ್ಲಿ ಬಳ್ಳಾರಿಯತ್ತ ಇಂದು ಮುಂಜಾನೆ ಪಯಣಿಸಲು ಸಿದ್ಧರಾದರು. ಆದರೆ, ಈ ಲಾರಿ ಮಡಿಕೇರಿ ತಲುಪುತ್ತಿದ್ದಂತೆ ಪೊಲೀಸರು ಅಡ್ಡಹಾಕಿ ನಿಲ್ಲಿಸಿದರು. ಜಿಲ್ಲೆಯಿಂದ ಹೊರ ಹೋಗಲು ಜಿಲ್ಲಾಧಿಕಾರಿಯವರ ಅನುಮತಿ ಬೇಕೆಂದು ಈ ಕಾರ್ಮಿಕರಿಗೆ ತಿಳಿಸಿ ನಂತರ ಜಿಲ್ಲಾಧಿಕಾರಿಯವರ ಆದೇಶದ ಮೇಲೆ ಇವರನ್ನು ಮಡಿಕೇರಿಯ ಮೆಟ್ರಿಕ್ ಬಾಲಕರ ವಸತಿ ನಿಲಯಕ್ಕೆ ಸಾಗಿಸಲಾಯಿತು. ಈ ಕಾರ್ಮಿಕರು ತಲುಪಿದ್ದೇ ತಡ, ಜಿಲ್ಲಾ ಆರೋಗ್ಯ ಇಲಾಖೆಯಿಂದ ನೇಮಿಸಿದ್ದ ತಂಡ ವಸತಿ ನಿಲಯಕ್ಕೆ ಆಗಮಿಸಿ ಈ 67 ಕಾರ್ಮಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಿದರಲ್ಲದೆ, ಕಾರ್ಮಿಕರಿಗೆ ಬೇಕಾದ ವೈದ್ಯಕೀಯ ಸಹಾಯ ನೀಡಿದರು. ಈ 67 ಜನರಲ್ಲಿ ಸುಮಾರು 13 ಪುಟ್ಟ ಮಕ್ಕಳೂ ಈ ವಸತಿ ನಿಲಯದಲ್ಲಿ ತಂಗಿರುತ್ತಾರೆ.

ಸ್ಕ್ರೀನಿಂಗ್ ಆದದ್ದೇ ತಡ, ವಸತಿ ನಿಲಯದ ಕಾರ್ಯಕರ್ತರೆಲ್ಲರೂ ಒಂದುಗೂಡಿ ಈ ಕಾರ್ಮಿಕರಿಗೆ ಬೆಳಗ್ಗಿನ ಉಪÀಹಾರ ತಯಾರಿಸಿ ನೀಡಿದರು. ಇನ್ನು ಇವರ ಕಾವಲಿಗಾಗಿ ಪೊಲೀಸರೂ ನೇಮಕಗೊಂಡರು.

ತಮ್ಮ ಊರಿಗೆ, ಊರಿನಲ್ಲಿ ತಮ್ಮ ಮನೆಗೆ, ಮನೆಯಲ್ಲಿ ಇವರುಗಳಿಗೋಸ್ಕರ ಕಾಯುತ್ತಿರುವ ಪುಟ್ಟ ಮಕ್ಕಳು ಹಾಗೂ ವಯಸ್ಸಾದ ತಂದೆತಾಯಿಯರತ್ತ ಮರಳಿ ತೆರಳಬೇಕು, ದಯವಿಟ್ಟು ನಮ್ಮನ್ನು ಬಳ್ಳಾರಿಗೆ ಕಳುಹಿಸಿಕೊಡಿ ಎಂದು ಅಂಗಲಾಚಿ ಈ ಕಾರ್ಮಿಕರು ‘ಶಕ್ತಿ’ಯಲ್ಲಿ ಕೇಳಿಕೊಂಡರಾದರೂ, ಇವರಿಗೆ ಕೊರೊನಾ ಬಗೆಯ ವಾಸ್ತವ ಅರಿವಿಲ್ಲವೆಂಬುದು ಸ್ಪಷ್ಟವಿತ್ತು.

ಇನ್ನು, ಉತ್ತರ ಪ್ರದೇಶ, ದೆಹಲಿ ಹೀಗೆ ಹಲವಾರು ರಾಜ್ಯಗಳು ಹಾಗೂ ಜಿಲ್ಲೆಗಳು ಕಾರ್ಮಿಕ ವರ್ಗದವರನ್ನು ಅಮಾನವೀಯ ರೀತಿಯಲ್ಲಿ ನೋಡಿ, ಅಮಾನವೀಯತೆಯಿಂದ ವರ್ತಿಸುತ್ತಿರುವದು ಸರ್ವೇ ಸಾಮಾನ್ಯವಾದರೂ, ಕೊಡಗು ಜಿಲ್ಲಾಡಳಿತ ಈ ಕಾರ್ಮಿಕರಿಗೆ, ಅಲ್ಲದೆ ಕೇರಳದಿಂದ ಬರುತ್ತಿರುವ ನೂರಾರು ಕಾರ್ಮಿಕರಿಗೆ ಆಶ್ರಯ ಕೊಡುತ್ತಿದೆ. ಅಲ್ಲದೆ, ಈ ಆಶ್ರಯ ಕೇಂದ್ರಗಳಲ್ಲಿ ಉತ್ತಮ ಸೌಲಭ್ಯಗಳನ್ನೂ ನೀಡುತ್ತಿರುವದು ನಿಜಕ್ಕೂ ಶ್ಲಾಘನೀಯ. -ಪ್ರಜ್ಞಾ ಜಿ.ಆರ್.