ಮಡಿಕೇರಿ, ಏ.1: ಕಳೆದ ಮಾರ್ಚ್ ತಾ.13 ರಂದು ರಾಷ್ಟ್ರದ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ಏರ್ಪಟ್ಟಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ 1,500 ಮಂದಿಗಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದರು. ದೇಶ-ವಿದೇಶ ಗಳಿಂದ ಜನರು ಜಮಾಯಿಸಿದ್ದರು. ಆ ಸಭೆಯಲ್ಲಿ ಭಾಗವಹಿಸಿದ್ದ ಅನೇಕರಿಗೆ ಕೊರೊನಾ ವೈರಸ್ ತಗುಲಿದ್ದು ಕೆಲವರು ಸಾವಿಗೀಡಾಗಿ ದ್ದಾರೆ. ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಕೊರೊನಾ ಹರಡದಂತೆ ತಡೆಗಟ್ಟಲು ದೇಶ ದಾದ್ಯಂತ ಪತ್ತೆ ಮಾಡಲಾಗುತ್ತಿದೆ.ಈ ಧಾರ್ಮಿಕ ಸಭೆಗೆ ಕೊಡಗು ಜಿಲ್ಲೆಯಿಂದಲೂ ಪಾಲ್ಗೊಂಡಿದ್ದವರ ಮಾಹಿತಿ ಪಡೆಯಲಾಗಿದೆ, ಜಿಲ್ಲೆಯಿಂದ ಭಾಗವಹಿಸಿದ್ದ 13 ಜನರನ್ನು ವಿಳಾಸದೊಂದಿಗೆ ಪತ್ತೆ ಹಚ್ಚಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಬಿಡುಗಡೆÀ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ಖಚಿತಪಡಿಸಿ ದ್ದಾರೆ. ವಿವರ ಈ ಕೆಳಗಿನಂತಿದೆ. ಜಿಲ್ಲಾಡಳಿತದ ತಂಡವು ಸಂಬಂಧಪಟ್ಟವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, 13 ಜನರ ಪೈಕಿ 5 ಜನರು ದೆಹಲಿಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದಾರೆ. ಅವರು ಸಭೆಯ ಬಳಿಕ ಜಿಲ್ಲೆಗೆ ಹಿಂತಿರುಗಿ ಬಂದಿಲ್ಲ. ಇನ್ನು 5 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಆಯಾ ಜಿಲ್ಲೆಗಳ ಆಡಳಿತ ಈ ಬಗ್ಗೆ ನಿಗಾ ವಹಿಸುತ್ತದೆ. ಉಳಿದ 3 ಪ್ರಕರಣದ ವ್ಯಕ್ತಿಗಳು ಕೊಡಗು ಜಿಲ್ಲೆಗೆ ಮರಳಿ ವಾಸವಿದ್ದು, ಇವರುಗಳಿಗೆ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿರುತ್ತದೆ. ಆದರೂ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ಸಮೂಹ ಸಂಪರ್ಕ ತಡೆ ಗೃಹಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಆದ್ದರಿಂದ ಈ ಬಗ್ಗೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೂ ಪರಿಶೀಲನೆ ಯಿಂದ ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಬಿಟ್ಟು ಹೋಗಿದ್ದಲ್ಲಿ, ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸು ವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಿ. ಅವರ ಪ್ರಕಾರ ನವದೆಹಲಿಗೆ ತೆರಳಿದ್ದವರಲ್ಲಿ ಪತ್ತೆಯಾಗಿರುವವರ ಪೈಕಿ ಓರ್ವ ಯೋಧನೂ ಒಳಗೊಂಡಿದ್ದು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ...
ಜಿಲ್ಲಾಡಳಿತದ ಪ್ರಕಟಣೆಯಂತೆ ಜಿಲ್ಲೆಯಲ್ಲಿನ ಇದುವರೆಗಿನ ಸಂಕ್ಷಿಪ್ತ ಮಾಹಿತಿ ಹೀಗಿದೆ:- ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ. ಅದರಂತೆ ಇಂದು ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 156, ವೀರಾಜಪೇಟೆ ತಾಲೂಕಿನಲ್ಲಿ 156, ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 123 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 381 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ.
ಇಲ್ಲಿಯವರೆಗೆ ಒಟ್ಟು 51 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 1 ಪ್ರಕರಣ ದೃಢ ಪಟ್ಟಿದ್ದು, 45 ಪ್ರಕರಣಗಳಲ್ಲಿ ನೆಗೇಟಿವ್ ವರದಿ ಬಂದಿರುತ್ತದೆ. ಇನ್ನು 5 ಪ್ರಕರಣಗಳಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ ಸೋಂಕು ದೃಢಪಟ್ಟ 1 ಪ್ರಕರಣ ಮತ್ತು 5 ಸೋಂಕು ಶಂಕಿತ ಪ್ರಕರಣಗಳು ಸೇರಿದಂತೆ ಒಟ್ಟು 6 ಪ್ರಕರಣಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ಯಲ್ಲಿಟ್ಟು ಉಪಚರಿಸಲಾಗುತ್ತಿದೆ.
ನಮಾಝ್ ನಿರ್ಬಂಧ ಮುಂದುವರಿಕೆ
ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾರ್ಚ್ 31 ರ ವರೆಗೆ ಜಿಲ್ಲೆಯ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಒಳಗೊಂಡಂತೆ ದೈನಂದಿನ ಸಾಮೂಹಿಕ ನಮಾಝ್ ಪ್ರಾರ್ಥನೆ ನಿರ್ಬಂಧಿಸಲಾಗಿತ್ತು.
ಈ ಸಂಬಂಧ ಸರ್ಕಾರವು ಹೊರಡಿಸಿರುವ ನಿರ್ದೇಶನಗಳಿಗೆ ಮುಂದುವರೆದು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಕ್ರವಾರ ಮಧ್ಯಾಹ್ನದ ನಮಾಝ್ ಸಹಿತ ಪ್ರತಿನಿತ್ಯ 5 ಬಾರಿಯ ಪ್ರಾರ್ಥನೆ ಗಳನ್ನು ಏಪ್ರಿಲ್ 14 ರವರೆಗೆ ನಿರ್ಬಂಧಿಸಲು ವಿಸ್ತರಿಸಲಾಗಿದೆ.
ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಈ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲು ಸೂಚಿಸಿದೆ. ಅಲ್ಲದೆ ಕೊರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಪ್ರತಿದಿನ ಕನ್ನಡ, ಉರ್ದು, ಮಲೆಯಾಳಂ - ಈ ಮೂರು 3 ಭಾಷೆಗಳಲ್ಲಿ 4 ಬಾರಿ ಮಸೀದಿಯ ಧ್ವನಿ ವರ್ಧಕದ ಮೂಲಕ ಸಾರಲು ಕೊಡಗು ಜಿಲ್ಲಾ ವಕ್ಪ್ ಸಲಹಾ ಸಮಿತಿಯ ವಕ್ಫ್ ಅಧಿಕಾರಿ ನಿರ್ದೇಶನ ನೀಡಿದ್ದಾರೆ.