ಮಡಿಕೇರಿ, ಏ. 1: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಂದು ಜಿಲ್ಲಾಡಳಿತದ ನಿರ್ದೇಶನದಂತೆ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಯೊಂದಿಗೆ ಹೆಚ್ಚಿನ ಒತ್ತಡವಿಲ್ಲದೆ ಬ್ಯಾಂಕ್ ವ್ಯವಹಾರ ಇತ್ಯಾದಿಯಲ್ಲಿ ತೊಡಗಿಸಿಕೊಂಡಿದ್ದರು.ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಲಭಿಸಿದ ಕಾಲಾವಕಾಶವನ್ನು ಜನರು ಸದ್ಬಳಕೆ ಮಾಡಿಕೊಂಡರೆ, ವರ್ತಕರು ದಿನಸಿ, ಸೊಪ್ಪು, ತರಕಾರಿ, ಹಣ್ಣು ಹಂಪಲು, ಔಷಧಿ, ಹಾಲು, ಪತ್ರಿಕೆಗಳ ಸಹಿತ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ಪೂರೈಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಬದಲಾದ ವ್ಯವಸ್ಥೆಯಲ್ಲಿ ನಗರದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರ ನಿರಾತಂಕವಾಗಿ ನಡೆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೈ ಬೆರಳೆಣಿಕೆ ಮಂದಿ ಕಾಣಿಸಿಕೊಂಡರು.ಇಳಿಕೆ: ಕಳೆದ ಸೋಮವಾರ ಅಲ್ಲಲ್ಲಿ ನಡೆದ ವ್ಯಾಪಾರ ಸಂದರ್ಭ ತರಕಾರಿ ಇತ್ಯಾದಿ ಬೆಲೆ ಗಗನಕ್ಕೇರಿದ್ದರೆ, ಇಂದು ಸಾಮಾನ್ಯ ಬೆಲೆಗೆ ಎಲ್ಲರಿಗೂ ಲಭಿಸುವಂತಾಯಿತು. ಟೊಮೆಟೋ ಅಂತೂ ಭಾರೀ ಪ್ರಮಾಣದಲ್ಲಿ ಕಂಡುಬಂದರೂ ರೂ. 10 ಮೌಲ್ಯಕ್ಕೂ ಕೆ.ಜಿ. ಟೊಮೆಟೋ ಕೊಳ್ಳುವವರು ಕಂಡುಬರಲಿಲ್ಲ. ಇತರ ತರಕಾರಿ ಸರಾಸರಿ ರೂ. 30 ರಿಂದ 60ರ ತನಕ ಗುಣಮಟ್ಟಕ್ಕೆ ತಕ್ಕಂತೆ ಈರುಳ್ಳಿ, ಆಲೂಗೆಡ್ಡೆ ಇತ್ಯಾದಿ ಮಾರಾಟ ಕಂಡುಬಂತು.

ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್‍ಗಳಿಲ್ಲದೆ ಗ್ರಾಮೀಣ ಜನತೆ ಹಾಗೂ ರೈತರು ಅಷ್ಟಾಗಿ ಕಂಡುಬರಲಿಲ್ಲ. ಮಡಿಕೇರಿ ಮಾರುಕಟ್ಟೆ ಪ್ರದೇಶ ಒಂದು ರೀತಿ ನಿರ್ಜನ ವಾಗಿತ್ತು. ಈ ವ್ಯಾಪ್ತಿಯಲ್ಲಿ ಕೆಲವೇ ಅಂಗಡಿಗಳಷ್ಟೇ ತೆರೆದುಕೊಂಡಿದ್ದರೂ, ಹೆಚ್ಚಿನ ವ್ಯಾಪಾರ ಗೋಚರಿಸಲಿಲ್ಲ.

ಮುಖ್ಯವಾಗಿ ಜನರು ದಿನಸಿ ಪದಾರ್ಥ, ವೈದ್ಯಕೀಯ ಔಷಧಿಗಳಿಗೆ ಅಲ್ಲಲ್ಲಿ ಸಾಲುಗಟ್ಟಿ ನಿಂತು ಖರೀದಿಸುತ್ತಿದ್ದದ್ದು ಗೋಚರಿಸಿತು.

ವಾಹನಗಳು ಕಡಿಮೆ: ಸೋಮವಾರಕ್ಕೆ ಹೋಲಿಸಿದರೆ ಇಂದು ವಾಹನಗಳ ಓಡಾಟ ಕೂಡ ನಗರದಲ್ಲಿ ಕಡಿಮೆಯಾಗಿದ್ದು, ಜನ ಸಂಚಾರ ಕೂಡ ಮೊನ್ನೆಯಷ್ಟು ಇರಲಿಲ್ಲ.

ಸ್ವಚ್ಛತೆಗೆ ಆದ್ಯತೆ: ಮಧ್ಯಾಹ್ನ ಜನ ಚದುರುತ್ತಿದ್ದಂತೆ ನಗರಸಭೆ, ಆರೋಗ್ಯ ಇಲಾಖೆಯ ಸಹಕಾರದಿಂದ ಅಗ್ನಿ ಶಾಮಕ ದಳ ಸಿಬ್ಬಂದಿ, ಹಗಲು ಜನನಿಬಿಡ ಹೊಂದಿದ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮುಂಜಾಗ್ರತಾ ಕ್ರಮ: ಪೊಲೀಸ್ ಇಲಾಖೆ, ಗೃಹರಕ್ಷಕ ಸಿಬ್ಬಂದಿ ವ್ಯಾಪಾರ ಮಳಿಗೆಗಳ ಸಹಿತ ಬಸ್ ನಿಲ್ದಾಣದಲ್ಲಿ ತರಕಾರಿ ಇತ್ಯಾದಿ ಖರೀದಿ ವೇಳೆ, ಮುಂಜಾಗ್ರತಾ ಕ್ರಮ ತೆಗೆದುಕೊಂಡು, ಸಾರ್ವಜನಿಕರು ಗುಂಪು ಗೂಡದೆ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸಿದ್ದು ಕಂಡುಬಂತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಡೀ ಮಡಿಕೇರಿಯ ಎಲ್ಲ ರಸ್ತೆಗಳು ಮರಳಿ ನಿರ್ಜನ

(ಮೊದಲ ಪುಟದಿಂದ) ಪ್ರದೇಶದಂತೆ ಅನುಭವವಾಗತೊಡಗಿತು.

ಅಲ್ಲಲ್ಲಿ ಆಸನ: ಈ ನಡುವೆ ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಅಂಗಡಿಗಳು, ವ್ಯಾಪಾರ ಕೇಂದ್ರಗಳ ಎದುರು ಹಿರಿಯ ನಾಗರಿಕರಿಗೆ ಅನುಕೂಲ ವಾಗುವಂತೆ ಕುರ್ಚಿಗಳನ್ನು ಹಾಕಿ, ತೊಂದರೆಗೆ ಒಳಗಾಗದೆ ಸುಧಾರಿಸಿಕೊಳ್ಳುವಂತೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಇಂದು ನಗರದೆಲ್ಲೆಡೆ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಿತು. ಅಂತೆಯೇ ತರಕಾರಿ, ಹಣ್ಣುಗಳ ದರಪಟ್ಟಿಯನ್ನು ಕೂಡ ಬೀದಿ ವ್ಯಾಪಾರಿಗಳ ಸಹಿತ ವರ್ತಕರು-ಗ್ರಾಹಕರಿಗೆ ತಿಳುವಳಿಕೆಗಾಗಿ ಮುದ್ರಿತ ಪ್ರತಿಗಳಲ್ಲಿ ಒದಗಿಸಿ ಕಾಳಸಂತೆ ವ್ಯಾಪಾರಕ್ಕೆ ಅವಕಾಶವಾಗದಂತೆ ನಿಗಾವಹಿಸಿದ್ದು ಕಂಡುಬಂತು.

ವೆಬ್‍ಸೈಟ್ ಮೂಲಕ ಖರೀದಿ

ಚೇಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ‘hಣಣಠಿs://ಞoಜಚಿgu.ಟeಣsಣಚಿಡಿಣ.iಟಿ’ ಮೂಲಕ ಲಭ್ಯವಿರುವ ಅಂಗಡಿಗಳನ್ನು ಆಯ್ಕೆ ಮಾಡಿ ದಿನಸಿ ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಇದಕ್ಕೆ ಅಲ್ಪ ಪ್ರಮಾಣದ ಸ್ಪಂದನೆಯೂ ದೊರಕಿದೆ. ವೆಬ್‍ಸೈಟ್ ಮೂಲಕ ಗ್ರಾಹಕರು ತಮಗೆ ಬೇಕಾದ ವಸ್ತು ಹಾಗೂ ತಮ್ಮ ವಾಸಸ್ಥಳ ತಿಳಿಸಬೇಕಾಗಿದೆ. ಕಫ್ರ್ಯೂ ಸಡಿಲಿಕೆ ಇರುವ ದಿನ ಹಾಗೂ ಸಮಯ ನೋಡಿಕೊಂಡು ಜಿಲ್ಲಾ ಚೇಂಬರ್ ಸದಸ್ಯರು ಗ್ರಾಹಕರಿಗೆ ಸಾಮಗ್ರಿ ಪೂರೈಕೆ ನಡೆಸುತ್ತಾರೆ. ವೆಬ್‍ಸೈಟ್ ಸೌಲಭ್ಯದ ಬಗ್ಗೆ ಜಿಲ್ಲಾಡಳಿತ ಮಾ. 29 ರಂದು ಮಾಹಿತಿ ನೀಡಿದ್ದು, ಏ. 1 ರಂದು ಕಫ್ರ್ಯೂ ಸಡಿಲಿಕೆ ಇದ್ದ ದಿನ ಹಲವು ಚೇಂಬರ್ ಸದಸ್ಯರು ಗ್ರಾಹಕರ ಮನೆಗೆ ತೆರಳಿ ಸಾಮಗ್ರಿ ವಿತರಿಸಿದ್ದು ಕಂಡುಬಂತು.

ವೆಬ್‍ಸೈಟ್ ಮೂಲಕ ಈಗಾಗಲೇ ಜಿಲ್ಲೆಯಾದ್ಯಂತ 1,255 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಇಂದು 70ಕ್ಕೂ ಅಧಿಕ ಗ್ರಾಹಕರು ವೆಬ್‍ಸೈಟ್ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಸಾಮಗ್ರಿಗಳನ್ನು ಕಾಯ್ದಿರಿಸಿ ಇಂದು ಕೆಲವರು ಸ್ವತಃ ಅವರೇ ಬಂದು ತಮ್ಮ ಸಾಮಗ್ರಿಗಳನ್ನು ಪಡೆದುಕೊಂಡರು ಹಾಗೂ ಕೆಲವರಿಗೆ ಅವರವರ ಮನೆಗಳಿಗೆ ಸಾಮಗ್ರಿ ವಿತರಿಸಲಾಗಿದೆ.

ಕೆಲ ಗ್ರಾಹಕರು ವೆಬ್‍ಸೈಟ್ ಮೂಲಕ, ವಿತರಣೆ ಮಾಡುವವರ ಮೊಬೈಲ್ ಸಂಖ್ಯೆ ಪಡೆದು ವಾಟ್ಸಾಪ್, ಫೋನ್ ಕರೆ ಮೂಲಕವೂ ಸಾಮಗ್ರಿಗಳನ್ನು ಕೋರಿದ್ದಾರೆ ಹಾಗೂ ಇದಕ್ಕೆ ಚೇಂಬರ್ ಸದಸ್ಯರು ಸ್ಪಂದಿಸಿದ್ದು, ಸಾಮಗ್ರಿ ವಿತರಣೆ ಪೂರೈಸಿದ್ದಾರೆ.

ಜಿಲ್ಲೆಯಾದ್ಯಂತ 162 ವರ್ತಕರು ವೆಬ್‍ಸೈಟ್ ಮೂಲಕ ಸಾಮಗ್ರಿ ಪೂರೈಕೆಗೆ ಒಪ್ಪಿಕೊಂಡಿದ್ದು, ಇನ್ನು ಕೆಲವು ದಿನಗಳಲ್ಲಿ ಹೆಚ್ಚಿನ ಸ್ಪಂದನ ದೊರೆಯುತ್ತದೆ ಎಂದು ಚೇಂಬರ್ ಪ್ರಮುಖರು ತಿಳಿಸಿದ್ದಾರೆ.