ಮಡಿಕೇರಿ, ಮಾ. 30: ಸೋಮವಾರ ಮುಂಜಾನೆಯಂದು ಮಡಿಕೇರಿಯ ಜಯನಗರದಲ್ಲಿ ಗರ್ಭಿಣಿ ಹಸುವೊಂದು ರಸ್ತೆ ಮಧ್ಯದಲ್ಲಿ ನರಳುತಿತ್ತು.
ಈ ಬಡಾವಣೆಯ ಕೆಲವರು ರಸ್ತೆಯಲ್ಲಿ ಹಸುವಿಗೆ ತೊಂದರೆ ಯಾಗಬಾರದೆಂದು ತಡೆದಿದ್ದರಾ ದರೂ, ಗರ್ಭಿಣಿ ಹಸುವಿನ ನರಳಾಟವನ್ನು ನೋಡಲಾರದೆ ಮಡಿಕೇರಿ ನಗರಸಭೆಗೆ ಕರೆ ಮಾಡಿ ಸಹಾಯ ಹಸ್ತ ಕೋರಿದರು. ನಗರಸಭೆಯಿಂದ ಟ್ರ್ಯಾಕ್ಟರ್ ಚಾಲಕ ಕಬೀರ್ ಹಾಗೂ ಪೌರಕಾರ್ಮಿಕ ರಂಗಪ್ಪ ಸ್ಥಳಕ್ಕೆ ಧಾವಿಸಿದರು. ಗರ್ಭಿಣಿ ಹಸುವಿನ ಹೆರಿಗೆ ಮಾಡಬೇಕಾದ ಅನಿವಾರ್ಯತೆ ಉದ್ಬವಿಸಿತು.
ಕಬೀರ್, ರಂಗಪ್ಪನತ್ತ ಹಸುವಿನ ಹೆರಿಗೆ ಮಾಡಲು ಸಿದ್ಧನಿದ್ದಾನೆಯೇ ಎಂದು ಕೇಳಿದ್ದೇ ತಡ, ರಂಗಪ್ಪ ಹೆರಿಗೆ ಕಾರ್ಯದಲ್ಲಿ ನಿರತರಾದರು. ಕಬೀರ್ ಹಾಗೂ ಜಯನಗರ ಬಡಾವಣೆಯ ಕೆಲವರ ಸಹಾಯದಿಂದ ಹೆರಿಗೆ ಕಾರ್ಯ ಯಶಸ್ವಿಯಾಗಿ ಹಸುವು ಕರುವೊಂದಕ್ಕೆ ಜನ್ಮ ನೀಡಿತು.
ನಗರಸಭೆಯ ಕಬೀರ್ ಹಾಗೂ ರಂಗಪ್ಪ ಮಾನವೀಯತೆಯ ಸಂಕೇತವಾದರು. ಈ ಹಿಂದೆಯೂ ಕಬೀರ್ ಹಾಗೂ ನಗರಸಭೆಯ ಕಾರ್ಮಿಕರ ತಂಡ ಅನೇಕ ಅನಾಥ ಸಾಕುಪ್ರಾಣಿಗಳನ್ನು ಸಂಕಷ್ಟದಿಂದ ಬದುಕಿಸಿ ಕಾಪಾಡಿದ್ದಾರೆ.