ಮಡಿಕೇರಿ, ಮಾ. 28: ಮಡಿಕೇರಿಯ ಜಿಲ್ಲಾ ವೈದ್ಯಕೀಯ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸೇವಾ ಭಾರತಿಯ 9 ಸ್ವಯಂಸೇವಕರು ರಕ್ತದಾನ ಮಾಡಿದ್ದಾರೆ. ಕೊರೊನಾ ಆತಂಕ ಹಿನ್ನೆಲೆ ರಕ್ತ ಕೊರತೆ ಎದುರಾಗಿತ್ತು.
ರಕ್ತದಾನ ಶಿಬಿರ ನಡೆಯದ ಕಾರಣ ರಕ್ತಕೊರತೆ ಎದುರಾಗಿದ್ದು, ಆ ದಿಸೆಯಲ್ಲಿ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ಸೇವಾಭಾರತಿ ಕಾರ್ಯಕರ್ತರು ತೀರ್ಮಾನಿಸಿದ್ದಾರೆ. ನಿನ್ನೆ ಸಾಮಾಜಿಕ ಕಾರ್ಯ ಆರಂಭದೊಂದಿಗೆ 10 ಮಂದಿ ರಕ್ತದಾನ ನೀಡಿದ್ದಾರೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆಯ ಮಾಹಿತಿಯನ್ನಾಧರಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಭಾರತಿ ತಂಡ ರಕ್ತದಾನ ಮಾಡಿದೆ. ಈಗಾಗಲೇ 100 ಕ್ಕೂ ಹೆಚ್ಚು ಸ್ವಯಂಸೇವಕರು ರಕ್ತದಾನಕ್ಕೆ ನೋಂದಾಯಿಸಿದ್ದು ಆಸ್ಪತ್ರೆಯಲ್ಲಿ ದಿನನಿತ್ಯ ರಕ್ತದ ಬಳಕೆಯನ್ನಾಧರಿಸಿ ಅಗತ್ಯವಿರುವ ರಕ್ತದ ಗ್ರೂಪ್ನ ದಾನಿಗಳು ಪ್ರತಿನಿತ್ಯ ರಕ್ತದಾನ ಮಾಡಲಿದ್ದಾರೆ ಎಂದು ಸೇವಾ ಭಾರತಿ ಪ್ರಮುಖರಾದ ಕೆ.ಕೆ. ಮಹೇಶ್ ಕುಮಾರ್ ಹಾಗೂ ಚಂದ್ರ ಉಡೋತ್ ತಿಳಿಸಿದ್ದಾರೆ.