ವೀರಾಜಪೇಟೆ, ಮಾ. 28: ಕೊರೊನಾ ವೈರಾಣು ವಿಚಾರದಲ್ಲಿ ನಾವುಗಳೇ ಮನೆಯಲ್ಲಿಯೆ ಇದ್ದು ಎಚ್ಚರ ವಹಿಸಬೇಕೇ ಹೊರತು ಯಾವುದೇ ಔಷಧಿ ಇರುವುದಿಲ್ಲ. ಹತ್ತು ವರ್ಷದ ಒಳಗೆ 60 ವರ್ಷದ ಮೇಲ್ಪಟ್ಟವರನ್ನು ಕುಟುಂಬದವರು ಎಚ್ಚರ ವಹಿಸಿಕೊಳ್ಳಬೇಕು ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಲಾಕ್‍ಡೌನ್ ವಿಚಾರದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗದುಕೊಂಡಿರುವುದು ಸ್ವಾಗತಾರ್ಹ. ಸಾರ್ವಜಕನಿರಿಗೆ ಅತ್ಯಾವಶ್ಯಕ ಸಾಮಗ್ರಿಗಳನ್ನು 12 ರಿಂದ 2 ಗಂಟೆಯವರೆಗೆ ಖರೀದಿಸಲು ನಿರ್ಬಂಧ ಸಡಿಲಿಕೆ ಮಾಡಿರುವುದು ಉತ್ತಮ ಕೆಲಸ. ಕೊರೊನಾ ರೋಗಾಣು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಜಿಲ್ಲಾಡಳಿತ ಕೊಂಡಂಗೇರಿಯಲ್ಲಿ ಬಫರ್‍ಝೋನ್ ಎಂದು ಘೋಷಣೆ ಮಾಡಿರುವುದರಿಂದ ಅಲ್ಲಿ 300 ಕುಟುಂಬವನ್ನು ಲಾಕ್‍ಡೌನ್ ಮಾಡಿದ್ದಾರೆ. ಅದರಲ್ಲಿ 70 ಕುಟುಂಬದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಉಳಿದವರ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಎಲ್ಲಾ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ಸಮನಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ, ಕೊರೊನಾ ವೈರಸ್‍ನ ಭೀತಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್‍ಗಳು ಮತ್ತು ಖಾಸಗಿ ಫೈನಾನ್ಸ್ ಕಂಪೆನಿಗಳು ಮಾರ್ಚ್ 31ಕ್ಕೆ ಎಲ್ಲಾ ವ್ಯವಹಾರಗಳನ್ನು ಪೂರ್ಣಗೊಳಿಸುತ್ತಿದ್ದು, ದೀರ್ಘಾವಧಿ ಕಂತುಗಳÀಲ್ಲಿ ಮರು ಪಾವತಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಹಮದ್ ರಾಫಿ, ಡಿ.ಎಸ್.ಎಸ್.ನ ರಜನಿಕಾಂತ್, ಸುಬೇರ್ ಉಪಸ್ಥಿತರಿದ್ದರು.