(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಮಾ.28: ಕೇರಳ ರಾಜ್ಯಕ್ಕೆ ತೆರಳಬೇಕಾಗಿದ್ದ ಎಲ್.ಪಿ.ಜಿ.ಗ್ಯಾಸ್ ಸಿಲಿಂಡರ್ ತುಂಬಿದ್ದ ಎಂಟು ಲಾರಿಗಳನ್ನು ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳು ಪೊಲೀಸ್ ಎಸ್ಕಾರ್ಟ್ ಮಾಡುವ ಮೂಲಕ ಕೊಡಗಿನ ಗಡಿ ಭಾಗವಾದ ಆನೆ ಚೌಕೂರು ಗೇಟ್ ದಾಟಿಸಿ ಗುಂಡ್ಲುಪೇಟೆ ಮಾರ್ಗವಾಗಿ ಕೇರಳ ರಾಜ್ಯಕ್ಕೆ ತೆರಳಲು ಅವಕಾಶ ಕಲ್ಪಿಸಿದರು.
ಶುಕ್ರವಾರ ರಾತ್ರಿ ಮೈಸೂರಿನಿಂದ 8 ಲಾರಿಗಳು ಗ್ಯಾಸ್ ಸಿಲಿಂಡರ್ ತುಂಬಿಸಿಕೊಂಡು ಕೊಡಗಿನ ಗಡಿ ಭಾಗ ಆನೆ ಚೌಕೂರು ಗೇಟ್ ದಾಟಿ ಗೋಣಿಕೊಪ್ಪಲುವಿನತ್ತ ಆಗಮಿಸಿ ದ್ದವು. ಆದರೆ ಕೊಡಗಿನ ಮೂಲಕ ಕೇರಳ ರಾಜ್ಯಕ್ಕೆ ತೆರಳಲು ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಲಾರಿಗಳು ಗೋಣಿಕೊಪ್ಪಲು ವಿನಲ್ಲಿಯೇ ರಾತ್ರಿ ಪೂರ್ತಿ ನಿಂತಿದ್ದವು. ಮುಂಜಾನೆ ವೇಳೆಯಲ್ಲಿ ಪತ್ರಕರ್ತ ಸುದ್ದಿಗಾಗಿ ತೆರಳಿದಾಗ ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದ ಮುಂದೆ ಸರತಿ ಸಾಲಿನಲ್ಲಿ ಗ್ಯಾಸ್ ತುಂಬಿ ಲಾರಿಗಳು ನಿಂತಿರುವುದು ಕಂಡು ಬಂತು. ಲಾರಿಯಲ್ಲಿ ದುಗುಡದಲ್ಲಿದ್ದ ಚಾಲಕರನ್ನು ಮಾತನಾಡಿಸಿದಾಗ ತಮ್ಮ ಅಳಲನ್ನು ಪತ್ರಕರ್ತನ ಮುಂದೆ ತೋಡಿಕೊಂಡರು.
ರಾತ್ರಿಯಿಂದ ಕುಡಿಯಲು ನೀರು, ಆಹಾರವಿಲ್ಲದೆ ಚಾಲಕರು ಬಳಲಿದ್ದರು. ಚಾಲಕರು ಎದುರಿಸಿದ ಸಮಸ್ಯೆಗಳನ್ನು ಸ್ಥಳದಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸಮಗ್ರ ಮಾಹಿತಿಗಳನ್ನು ಚಿತ್ರ ಸಹಿತವಾಗಿ ವಿವರಿಸಲಾಯಿತು. ಪತ್ರಕರ್ತನ ಮಾಹಿತಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಗಳು ಲಾರಿಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಬೆಳಿಗ್ಗೆ 10.30 ಗಂಟೆಗೆ ಲಾರಿಗಳನ್ನು ಆನೆ ಚೌಕೂರು ಗೇಟ್ ನಿಂದ ಗುಂಡ್ಲುಪೇಟೆ ಮಾರ್ಗವಾಗಿ ಸಂಚಾರ ಮಾಡಲು ಪೊಲೀಸರಿಗೆ ಜಿಲ್ಲಾಧಿಕಾರಿ ಗಳು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಸೂಚನೆ ಪಾಲಿಸಿದ ಗೋಣಿಕೊಪ್ಪ ಪೊಲೀಸರು ಎಲ್ಲಾ ಲಾರಿಗಳನ್ನು ಎಸ್ಕಾರ್ಟ್ ಮೂಲಕ ಕೊಡಗಿನ ಗೇಟ್ ದಾಟಿಸಿದರು. ಹಸಿವಿನಿಂದ ಬಳಲಿದ್ದ ಲಾರಿ ಚಾಲಕರಿಗೆ ಪತ್ರಕರ್ತ ತನ್ನ ಮನೆಯಿಂದ ಬೆಳಗಿನ ಉಪಾಹಾರ ತಯಾರಿಸಿ ಚಾಲಕರ ಹಸಿವು, ಬಾಯಾರಿಕೆ ತಣಿಸುವ ಕೆಲಸ ಮಾಡಿದರು. ಕೇರಳದ 11 ಲಾರಿಗಳು ಪ್ರತಿನಿತ್ಯ ಗ್ಯಾಸ್ ಸಿಲಿಂಡರ್ ತರಲು ಕೊಡಗಿನ ಕುಟ್ಟ, ತೋಲ್ಪಟ್ಟಿ, ಹಾಗೂ ಮಾಕುಟ್ಟ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದವು. ಶುಕ್ರವಾರ ಎಂದಿನಂತೆ ಲಾರಿಗಳು ಗೇಟ್ ದಾಟಿ ಮೈಸೂರಿಗೆ ತೆರಳಿದ್ದವು. ಆದರೆ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇರಳ - ಕೊಡಗು ಸಂಪರ್ಕ ಬಂದ್ ಮಾಡಿದ್ದ ವಿಷಯ ಲಾರಿಯ ಚಾಲಕರ ಗಮನಕ್ಕೆ ಬಂದಿರಲಿಲ್ಲ. ಇದರಿಂದಾಗಿ ರಾತ್ರಿಯಿಡೀ ಚಾಲಕರು ಮುಂದೇನು ಎಂದು ಕಂಗಾಲಾಗಿದ್ದರು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಸಹಕರಿಸಿದ ಪತ್ರಕರ್ತನ ಸಹಾಯವನ್ನು ಸ್ಮರಿಸಿ ಧನ್ಯತಾ ಭಾವದಿಂದ ತಮ್ಮ ಲಾರಿಗಳೊಂದಿಗೆ ಚಾಲಕರು ಕೇರಳ ರಾಜ್ಯದತ್ತ ಪ್ರಯಾಣ ಬೆಳೆಸಿದರು.