ಮಡಿಕೇರಿ, ಮಾ. 28: ಕೇರಳದಿಂದ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಾಕುಟ್ಟ, ಕುಟ್ಟ ಹಾಗೂ ಕರಿಕೆ ಮಾರ್ಗದ ರಸ್ತೆ ಸಂಪರ್ಕವನ್ನು; ಕೊಡಗು ಜಿಲ್ಲಾಡಳಿತ ಸಂಪೂರ್ಣ ಮುಚ್ಚುವುದರೊಂದಿಗೆ; ಹಾಸನ, ಮೈಸೂರು, ದಕ್ಷಿಣಕನ್ನಡ ಮೂಲಕ ಕೊಡಗು ಪ್ರವೇಶಿಸುವ 11 ಕಡೆಗಳಲ್ಲಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಠಿಣ ನಿರ್ಧಾರ ತೆಗೆದುಕೊಂಡಿರುವ ಬೆನ್ನಲ್ಲೇ; ಕೇರಳ ಮುಖ್ಯಮಂತ್ರಿ ದೇಶದ ಪ್ರಧಾನಮಂತ್ರಿಗಳಿಗೆ ಪತ್ರ ಮುಖೇನ ಅಂತರ್ರಾಜ್ಯ ಗೇಟ್ಗಳನ್ನು ಮುಚ್ಚದಂತೆ ಒತ್ತಾಯಿಸಿರುವ ಸಂಗತಿ ಬಹಿರಂಗಗೊಂಡಿದೆ.ಈಗಾಗಲೇ ದುಬೈ ಮತ್ತಿತರ ಹೊರ ದೇಶಗಳಿಂದ ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳು ಸೇರಿದಂತೆ ಕೊಡಗಿಗೆ ಬರುತ್ತಿರುವ ಮಂದಿ ಯಿಂದ; ಕೊರೊನಾ ಹರಡುತ್ತಿರುವ ಅಂಶ ದೃಢಪಟ್ಟಿರುವ ಬೆನ್ನಲ್ಲೇ ಕರ್ನಾಟಕ ಸರಕಾರ ಹಾಗೂ ಆಯಾ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದ್ದಾಗಿದೆ.
ಈ ನಡುವೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಮುಖೇನ ಒತ್ತಡ ಹಾಕಿರುವ ಕೇರಳ ಮುಖ್ಯಮಂತ್ರಿ ಪಿಣಿರಾಯಿ ವಿಜಯನ್, ಕೊಡಗು ಸೇರಿದಂತೆ ಇತರ ಜಿಲ್ಲೆಗಳಿಗೆ ಅಲ್ಲಿಂದ ಬರುವ ಮಾರ್ಗಗಳ ನಿರ್ಬಂಧ ತೆರವು ಗೊಳಿಸು ವಂತೆ ಒತ್ತಾಯಿಸಿದ್ದಾರೆ. ಬದಲಾಗಿ ಕೇರಳದ ಕಾಸರಗೋಡು ಜಿಲ್ಲೆ ಹಾಗೂ ಇತರೆಡೆಗಳಿಂದ ದಕ್ಷಿಣಕನ್ನಡ, ಉಡುಪಿ, ಮೈಸೂರು ಜಿಲ್ಲೆಗಳ ಸಂಪರ್ಕ ಸಾಧಿಸಿರುವ ಮಂದಿಯಿಂದ ಕೊರೊನಾ ಸೋಂಕು ಹಬ್ಬಿರುವ ಅಪಾಯದ ಕುರಿತು ಆ ರಾಜ್ಯದ ಮುಖ್ಯಮಂತ್ರಿಗಳು ಸೊಲ್ಲೆತ್ತದಿರುವ ಬಗ್ಗೆ ಟೀಕೆಯೂ ಕೇಳಿಬರತೊಡಗಿದೆ.
ಸಂಸದ ಪ್ರತಾಪ್ ಆಕ್ರೋಶ: ಕೇರಳ ಮುಖ್ಯಮಂತ್ರಿಗಳ ಧೋರಣೆಯನ್ನು ಆಕ್ಷೇಪಿಸಿರುವ ಕೊಡಗು - ಮೈಸೂರು ಸಂಸದ ಪ್ರತಾಪ್ಸಿಂಹ ಅವರು; ನೇರವಾಗಿ ಪಿಣಿರಾಯ್ ವಿಜಯನ್ ಅವರಿಗೆ ಪತ್ರ ಬರೆದು ಕೇರಳದ ಕಣ್ಣೂರು ಸೇರಿದಂತೆ ಆ ರಾಜ್ಯದ ಮುಖ್ಯಮಂತ್ರಿಗಳ ತವರು ನೆಲದಲ್ಲಿ ಕೊರೊನಾ ಸೋಂಕಿನ ಅಪಾಯಕಾರಿ ಬೆಳವಣಿಗೆಯನ್ನು ನೆನಪಿಸಿದ್ದಾರೆ. ಈ ಹಿನ್ನೆಲೆ ಗಡಿಗೇಟ್ಗಳನ್ನು ತೆರೆಯಲು ಯತ್ನಿಸಿ; ಕೊಡಗು ಸೇರಿದಂತೆ ಕರ್ನಾಟಕದ ಜನತೆಗೆ ಅಪಾಯ ತಂದೊಡ್ಡದಂತೆ ಗಮನ ಸೆಳೆದಿದ್ದಾರೆ.
ಇತ್ತ ಕರ್ನಾಟಕ ಮುಖ್ಯಮಂತಿ ್ರಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ರವಾನಿಸಿ; ರಾಜ್ಯ ಮುಖ್ಯ ಕಾರ್ಯದರ್ಶಿಗಳು ಕೊಡಗು ಜಿಲ್ಲಾಧಿಕಾರಿ ಅವರಿಗೆ ಒತ್ತಡ ಹೇರಿ ಕೇರಳ ಗಡಿಗೇಟ್ ತೆಗೆಸದಂತೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ಕೆಜಿಬಿ - ಸುನಿಲ್ ಭೇಟಿ : ನಿನ್ನೆ ಜಿಲ್ಲಾಡಳಿತದೊಂದಿಗೆ ಜನಪ್ರತಿನಿಧಿಗಳ ಸಭೆ ನಡೆದ ಬೆನ್ನಲ್ಲೇ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಖುದ್ದು ಮಾಕುಟ್ಟಕ್ಕೆ ತೆರಳಿ ಗಡಿ ಬಂದ್ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಯಾರದೇ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಂತರರಾಜ್ಯ ಗಡಿ ಗೇಟ್ಗಳನ್ನು ತೆರವುಗೊಳಿಸದಂತೆ ಪಟ್ಟು ಹಿಡಿದಿದ್ದಾರೆ.
ಐಜಿಪಿ ಭೇಟಿ : ಈ ಸಂದರ್ಭ ಕರ್ನಾಟಕ ದಕ್ಷಿಣ ವಲಯ ಐಜಿಪಿ ವಿಫುಲ್ಕುಮಾರ್ ಹಾಗೂ ಕಣ್ಣೂರು ಎಸ್ಪಿ ಯತೀಶನ್ ಕೂಡ ಧಾವಿಸಿ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿರುವದನ್ನು ತೆರವುಗೊಳಿಸಲು; ಮಾಕುಟ್ಟದಲ್ಲಿ ಕೊಡಗು ಜಿಲ್ಲಾಡಳಿತ ನಿಯೋಜಿಸಿರುವ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾಗಿಯೂ ತಿಳಿದು ಬಂದಿದೆ. ಆದರೆ ಇಂತಹ ಕ್ರಮಕ್ಕೆ ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾ ದೀತು ಎಂದು ಜಿಲ್ಲೆಯ ಪ್ರತಿನಿಧಿಗಳು ಎಚ್ಚರಿಸಿದ್ದರೆನ್ನಲಾಗಿದೆ.
ಡಿಸಿ - ಎಸ್ಪಿ ಪರಿಶೀಲನೆ : ಈ ಎಲ್ಲಾ ಬೆಳವಣಿಗೆ ನಡುವೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಖುದ್ದು
(ಮೊದಲ ಪುಟದಿಂದ) ಮಾಕುಟ್ಟದಲ್ಲಿ ಭದ್ರತಾ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೇರಳದಿಂದ ಸುಮಾರು 156 ಕಾರ್ಮಿಕರನ್ನು ಆ ರಾಜ್ಯದ ಮಂದಿ ಗಡಿಯಲ್ಲಿ ಬಿಟ್ಟು ತೆರಳಿರುವದು ಕಂಡು ಬಂದಿದೆ.
ಶಾಲೆಯಿಂದ ಊರಿಗೆ : ಈ ಕಾರ್ಮಿಕರಿಗೆ ಜಿಲ್ಲಾಡಳಿತ ಆರೋಗ್ಯ ತಪಾಸಣೆಯೊಂದಿಗೆ; ಅಲ್ಲಿನ ಮೊರಾರ್ಜಿ ಶಾಲೆಯಲ್ಲಿ ವಸತಿ, ಊಟ ಕಲ್ಪಿಸಿ; ಬಳಿಕ ಉತ್ತರ ಕರ್ನಾಟಕದ ಬಾಗಲಕೋಟೆ, ಕೊಪ್ಪಳ, ಗದಗ್ ಮುಂತಾದೆಡೆಯ ಮಂದಿಯನ್ನು ತಮ್ಮ ತವರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಒಟ್ಟಿನಲ್ಲಿ ಅಂತರ್ರಾಜ್ಯ ಗಡಿ ಮುಚ್ಚುವಲ್ಲಿ ಒತ್ತಡದ ನಡುವೆಯೂ ಕೊಡಗು ಜಿಲ್ಲಾಡಳಿತ ದಿಟ್ಟ ಕ್ರಮ ತೆಗೆದುಕೊಂಡಂತಿದೆ.
ವೀಣಾ ಅಚ್ಚಯ್ಯ ಆಕ್ಷೇಪ : ಈ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾಡಳಿತ ಕೇರಳ ಗಡಿ ಗೇಟ್ಗಳನ್ನು ಸಂಪೂರ್ಣ ಮುಚ್ಚಿ; ಈಗಾಗಲೇ ಜನತೆಯ ಸುರಕ್ಷತೆಗಾಗಿ ಕಠಿಣ ನಿರ್ಧಾರ ಕೈಗೊಂಡಿದೆ; ನಿನ್ನೆ ಜನಪ್ರತಿನಿಧಿಗಳ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಜಿಲ್ಲಾಡಳಿತಕ್ಕೆ ಕೊಡಗಿನ ಶಾಸಕರುಗಳ ಸಹಿತ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಬೆಂಬಲ ನೀಡಿದ್ದಾಗಿದೆ ಎಂದು ಅವರು ನೆನಪಿಸಿದ್ದಾರೆ.
ಹೀಗಿರುವಾಗ ಕೇರಳ ಮುಖ್ಯಮಂತ್ರಿಗಳ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಣೆ ನೀಡದೆ; ಕೊಡಗು ಮತ್ತು ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ತೀರ್ಮಾನಗಳಿಗೆ ಅಡ್ಡಿ ಮಾಡಬಾರದೆಂದು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಗಡಿಗಳಲ್ಲೂ ಕ್ರಮ : ಕುಶಾಲನಗರ ಪೊಲೀಸ್ ಉಪ ವಿಭಾಗದಿಂದ ಸೋಮವಾರಪೇಟೆ ತಾಲೂಕಿನಲ್ಲಿ ಹೊರ ಜಿಲ್ಲೆಯಿಂದ ಕೊಡಗು ಪ್ರವೇಶಿಸುವ ಒಂಭತ್ತು ಕಡೆಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೊಪ್ಪ, ಶಿರಂಗಾಲ, ಸೂಳೆಕೋಟೆ, ಬಾಣಾವರ, ಇಪ್ಲಿ, ಶಾಂತಪುರ, ನಿಲುವಾಗಿಲು, ಚಂಗಡಹಳ್ಳಿ, ಕೂತಿ ಮೂಲಕ ಪ್ರವೇಶಿಸುವ ಮಾರ್ಗಗಳನ್ನು ಮುಚ್ಚಿಸಲಾಗಿದೆ. ಇಲ್ಲಿ ಪೊಲೀಸ್, ಗೃಹರಕ್ಷಕ ಸಿಬ್ಬಂದಿ ಹಾಗೂ ತರಬೇತಿಯಲ್ಲಿರುವ ಆರಕ್ಷಕರನ್ನು ಜಿಲ್ಲಾ ಶಶಸ್ತ್ರ ಪಡೆ ಸಹಿತ ನಿಯೋಜಿಸಲಾಗಿದೆ.
ಅಂತೆಯೇ ವೀರಾಜಪೇಟೆ ಉಪವಿಭಾಗದ; ಮಾಕುಟ್ಟ, ಕುಟ್ಟ ಸಹಿತ ಆನೆಚೌಕೂರು ಗೇಟ್ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮಡಿಕೇರಿ ಉಪವಿಭಾಗದಲ್ಲಿ ಕರಿಕೆ ಸಹಿತ ಸಂಪಾಜೆ ಗೇಟ್ನಲ್ಲಿ ನಿರ್ಬಂಧ ಸಹಿತ ಕಣ್ಗಾವಲು ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.