ಸಿದ್ದಾಪುರ, ಮಾ. 28: ಚೆಟ್ಟಳ್ಳಿಯಲ್ಲಿ ನಡೆದ ಒಂಟಿ ವೃದ್ಧೆ ಕಾಮವ್ವ ಅವರ ಕೊಲೆ ಪ್ರಕರಣ ಇದೀಗ ಮೈಕ್ರೋ ಫೈನಾನ್ಸ್ ಸಾಲದೊಂದಿಗೆ ತಳುಕು ಹಾಕಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿ ಪ್ರಿಯ ಈ ಸತ್ಯವನ್ನು ಬಾಯಿ ಬಿಟ್ಟಿದ್ದು, ಫೈನಾನ್ಸ್ ಸಾಲ ತೀರಿಸುವುದಕ್ಕಾಗಿ ಸರ ಕದಿಯಲು ಕಾಮವ್ವ ಅವರ ಕೊರಳಿಗೆ ಕೈ ಹಾಕಿದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾಳೆ. ಸರ ಎಳೆಯುವ ಸಂದರ್ಭ ಆಯತಪ್ಪಿ ಬಿದ್ದು ಕಾಮವ್ವ (80) ಮೃತಪಟ್ಟಿದ್ದಾರೆ ಎಂದು ಹೇಳಿದ್ದಾಳೆ.ನಿವೃತ್ತ ಶಿಕ್ಷಕಿ ಕಾಮವ್ವ ಅವರ ಸಾವಿಗೆ ಆರೋಪಿ ಮಹಿಳೆ ಪ್ರಿಯಾಳಿಗಿದ್ದ ಮೈಕ್ರೋ ಫೈನಾನ್ಸ್‍ನ ಒತ್ತಡವೇ ಕಾರಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾರ್ಮಿಕ ಮಹಿಳೆ ಪ್ರಿಯ ಮೈಕ್ರೋ ಫೈನಾನ್ಸ್‍ನಲ್ಲಿ ಸಾಲ ಪಡೆದಿದ್ದಳು. ಸಾಲ ತೀರಿಸಬೇಕೆಂದು ಫೈನಾನ್ಸ್‍ನ ಮುಖ್ಯಸ್ಥರು ಒತ್ತಡ ಹೇರುತ್ತಿದ್ದರು, ಅಲ್ಲದೆ ತಲೆ ಎತ್ತಿ ಓಡಾಡಲಾಗದ ಪರಿಸ್ಥಿತಿ ಪ್ರಿಯಾಳನ್ನು ಕಾಡಿತ್ತು. ಇದರಿಂದ ಬೇಸತ್ತ ಆಕೆ ದಿಢೀರ್ ಆಗಿ ಸಂಚೊಂದನ್ನು ರೂಪಿಸಿ ನಾಲ್ಕು ವರ್ಷಗಳ ಕಾಲ ತಾನಿದ್ದ ಬಾಡಿಗೆ ಮನೆಯ ಒಡತಿ ಕಾಮವ್ವ ಅವರ ಬಳಿಯಿಂದ (ಮೊದಲ ಪುಟದಿಂದ) ಆಭರಣ ಕದಿಯುವ ಪ್ರಯತ್ನಕ್ಕೆ ಮುಂದಾದಳು. ಒಂಟಿ ವೃದ್ಧೆಯ ಎಲ್ಲಾ ಚಲನವಲನಗಳನ್ನು ಅರಿತಿದ್ದ ಪ್ರಿಯಾ ತಾ. 23 ರಂದು ಮನೆಯ ಹಿಂಬಾಗಿನಿಂದ ಪ್ರವೇಶಿಸಿದ್ದಾಳೆ. ಕೊರಳಿನಲ್ಲಿದ್ದ ಸರವನ್ನು ಬಲವಂತವಾಗಿ ಎಳೆದಾಗ ಕಾಮವ್ವ ಅವರ ತಲೆ ಬಾಗಿಲಿನ ಕಟ್ಟಳೆಗೆ ಬಡಿದು ಅವರು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಆದರೆ ಪ್ರಜ್ಞೆ ತಪ್ಪಿ ಬಿದ್ದಿರಬಹುದೆಂದು ಭಾವಿಸಿದ ಆರೋಪಿ ಪ್ರಿಯಾ ಸರದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ನಂತರ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಂದು ಸರವನ್ನು ಅಡವಿಡಲು ಪ್ರಯತ್ನಿಸಿದ್ದಾಳೆ. ಆದರೆ ಸಂಘದಲ್ಲಿ ಸದಸ್ಯರಾದವರ ಆಭರಣವನ್ನು ಮಾತ್ರ ಅಡವಿಟ್ಟುಕೊಳ್ಳುವುದಾಗಿ ವ್ಯವಸ್ಥಾಪಕರು ತಿಳಿಸಿದಾಗ ಸದಸ್ಯತ್ವ ಇಲ್ಲದೆ ಅಸಹಾಯಕಳಾದ ಪ್ರಿಯಾ ವೈನ್ ಶಾಪ್‍ವೊಂದರ ಸಿಬ್ಬಂದಿಯ ಬಳಿ ಅಡವಿಡಲು ಸಹಾಯ ಮಾಡುವಂತೆ ಕೋರಿದ್ದಾಳೆ. ಸಿಬ್ಬಂದಿ ಸದಸ್ಯತ್ವ ಹೊಂದಿದ್ದರೂ ಅವರ ಹಳೇ ಸಾಲ ಬಾಕಿ ಇರುವ ಕಾರಣ ಸರವನ್ನು ಅಡವಿಟ್ಟುಕೊಳ್ಳಲು ಸಂಘ ಒಪ್ಪಿಕೊಳ್ಳಲಿಲ್ಲ. ನಂತರ ಪ್ರಿಯಾ ಸ್ಥಳೀಯ ಉದ್ಯಮಿ ರಮ್ಮಿ ಎಂಬವರ ಸಹಕಾರ ಪಡೆದು ಸಂಘದಲ್ಲಿ ಸರವನ್ನು ಅಡವಿಟ್ಟು ಹದಿನೆಂಟು ಸಾವಿರ ರೂಪಾಯಿಗಳನ್ನು ಪಡೆದು ತಕ್ಷಣ ಮೈಕ್ರೋ ಫೈನಾನ್ಸ್‍ಗೆ ತೆರಳಿ ಸಾಲವನ್ನು ಮರು ಪಾವತಿಸಿದ್ದಳು.
ಇದಿಷ್ಟು ಮಾಹಿತಿಯನ್ನು ಮಹಜರಿಗೆಂದು ಕರೆದುಕೊಂಡು ಹೋಗಿದ್ದಾಗ ಪ್ರಿಯಾ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾಳೆ. ನಂತರ ಪೊಲೀಸರು ಸಹಕಾರ ಸಂಘದಿಂದ ಚಿನ್ನದ ಸರವನ್ನು ವಶಕ್ಕೆ ಪಡೆದು ಆರೋಪಿ ಪ್ರಿಯಾಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
-ಅಂಚೆಮನೆ ಸುಧಿ