ಮಡಿಕೇರಿ, ಮಾ. 29: ದೇಶಕಂಡ ವೀರ ಸೇನಾನಿ, ಕೊಡಗಿನವರಾದ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ 114ನೇ ಜನ್ಮದಿನಾಚರಣೆಯನ್ನು ಮಾರ್ಚ್ 31 ರಂದು ಪ್ರಸಕ್ತ ವರ್ಷ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಿಂದಾಗಿ ವಿಭಿನ್ನ ರೀತಿಯಲ್ಲಿ ಆಯೋಜಿಸಲು ಫೀಲ್ಡ್‍ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಚಿಂತನೆ ನಡೆಸಿದೆ. ವೀರ ಸೇನಾನಿಯ ಜನ್ಮದಿನಾಚರಣೆಯನ್ನು ಪ್ರಸ್ತುತ ದೇಶ ಲಾಕ್‍ಡೌನ್ ಆಗಿರುವದರಿಂದ ಸಾರ್ವತ್ರಿಕ ಆಚರಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ವಾದ ವ್ಯಾಟ್ಸಾಪ್ ಗುಂಪುಗಳ ಮೂಲಕ ವಿಭಿನ್ನವಾಗಿ ಕೆಲವು ಸ್ಪರ್ಧೆಗಳು ಸೇರಿದಂತೆ ಜನರಲ್ ತಿಮ್ಮಯ್ಯ ಅವರ ಸೇವೆ - ಸಾಧನೆಗಳ ಕುರಿತಾದ ಸವಿನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕವಾದ ವ್ಯಾಟ್ಸಾಪ್ ಗುಂಪೊಂದನ್ನು ರಚಿಸಲಾಗಿದ್ದು; ಈ ಗುಂಪಿನ ಮೂಲಕ ಇತರ ಗುಂಪುಗಳಿಗೆ, ಆಸಕ್ತರಿಗೆ ಸಂದೇಶವನ್ನು ಹರಿಯಬಿಡಲಾಗುತ್ತಿದೆ. ತಿಮ್ಮಯ್ಯ ಅವರ ಕುರಿತಾದ ಪ್ರಶ್ನೋತ್ತರ ಗಳು, ರಾಷ್ಟ್ರಭಕ್ತಿಗೀತೆ ಗಳನ್ನು ಸೋಲೋ ಹಾಗೂ ಗುಂಪಿನ ಮೂಲಕ (ಸಾಮಾಜಿಕ ಅಂತರ ಕಾಯ್ದುಕೊಂಡು) ತಮ್ಮ ತಮ್ಮ ಮನೆಗಳಿಂದಲೇ ವೀಡಿಯೋ ಮಾಡಿ ಕಳುಹಿಸುವುದು, ತಿಮ್ಮಯ್ಯ ಅವರ ಸೇವೆ - ವೃತ್ತಿಪರತೆಯನ್ನು ಹಂಚಿಕೊಳ್ಳುವದು ಇಂತಹ ಪರಿಕಲ್ಪನೆಗಳ ಮೂಲಕ ಈಗಾಗಲೇ ಪ್ರಾರಂಭಿಸಲಾಗಿದೆ. ಈ ಪ್ರಯತ್ನಕ್ಕೆ ತಿಮ್ಮಯ್ಯ ಅಭಿಮಾನಿಗ ಳಿಂದ, ಮಕ್ಕಳು - ಪೋಷಕರು, ಸೇನಾ ಅಭಿಮಾನಿಗಳಿಂದ ಅಪಾರ ಬೆಂಬಲವೂ ವ್ಯಕ್ತಗೊಂಡಿರುವದಾಗಿ ಫೋರಂನ ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂದಾ ನಂಜಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಜನರಲ್ ತಿಮ್ಮಯ್ಯ ಯಾವುದೇ ಒಂದು ಜಾತಿ, ಜಿಲ್ಲೆ, ರಾಜ್ಯದ ಪ್ರಜೆಯಲ್ಲ. ಅವರೊಬ್ಬ ದೇಶ ಭಕ್ತ ನಾಯಕ. ಆದ್ದರಿಂದ ಜಿಲ್ಲೆಯ ಎಲ್ಲಾ ಮಕ್ಕಳು, ಯುವಕ ಯುವತಿಯರು ಭಾಗವಹಿಸಬಹುದು.ಸ್ಪರ್ಧೆ ಮತ್ತಿತರ ಉದ್ದೇಶಗಳನ್ನು ವ್ಯಾಟ್ಸಾಪ್ ಮೂಲಕ ಎಲ್ಲರಿಗೂ ರವಾನಿಸಲಾಗುತ್ತಿದೆ. ಹಲವು ಸ್ಪರ್ಧೆಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಈ ಕುರಿತು ಬರುವ ಸಂದೇಶಗಳನ್ನು ಇತರರಿಗೂ ರವಾನಿಸಿ ಅವರುಗಳನ್ನೂ ಪ್ರೇರೇಪಿಸುವ ಮೂಲಕ ಸೇನಾನಿಗೆ ಗೌರವ ಸಲ್ಲಿಸುವಂತೆ ಅವರು ಕೋರಿದ್ದಾರೆ.