ವೀರಾಜಪೇಟೆ, ಮಾ. 28: ಮಹಾಮಾರಿ ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಲಾಕ್ ಡೌನ್‍ನ್ನು ಕಠಿಣಗೊಳಿಸಿದ್ದರಿಂದ ಇಂದು ವೀರಾಜಪೇಟೆ ಪಟ್ಟಣದಾದ್ಯಂತ ಎಲ್ಲ ರಸ್ತೆಗಳು ವಾಹನ ಹಾಗೂ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ವೀರಾಜಪೇಟೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಗಳು ಖಾಸಗಿ ಬಸ್ಸು ನಿಲ್ದಾಣದ ಬಳಿ ಪೊಲೀಸರು ಲಾಠಿಯೊಂದಿಗೆ ಬಂದೋಬಸ್ತ್‍ನಲ್ಲಿದ್ದುದರಿಂದ ಜನರು ವಾಹನದೊಂದಿಗೆ ಈ ಭಾಗದಲ್ಲಿ ಸುಳಿಯಲು ಅವಕಾಶವಿರಲಿಲ್ಲ.

ವೀರಾಜಪೇಟೆ ಡಿ.ವೈ.ಎಸ್.ಪಿ. ಸಿ.ಟಿ.ಜಯಕುಮಾರ್ ಅವರು ತಾಲೂಕಿನಾದ್ಯಂತ ಬಂದೋ ಬಸ್ತ್‍ನಲ್ಲಿ ನಿರತರಾಗಿದ್ದರೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರು ವೀರಾಜಪೇಟೆ ಪಟ್ಟಣದಾದ್ಯಂತ ಬಂದೋಬಸ್ತ್‍ನಲ್ಲಿದ್ದರು. ಪೊಲೀಸ್ ಸಿಬ್ಬಂದಿಗಳು, ಹೋಮ್ ಗಾಡ್ರ್ಸ್‍ಗಳು, ಮಹಿಳಾ ಪೊಲೀಸರು ಬಂದೋಬಸ್ತ್ ನಲ್ಲಿ ನಿರತರಾಗಿದ್ದುದು ಕಂಡುಬಂತು.

ತಾಲೂಕು ತಹಶೀಲ್ದಾರ್ ನಂದೀಶ್ ಅವರು ಕೊಂಡಂಗೇರಿಯ ಬಫರ್ ಜೋನ್ ಹಾಗೂ ಕ್ವಾರಂಟೈನ್‍ನಲ್ಲಿರುವ ಕುಟಂಬಗಳನ್ನು ಪರಿಶೀಲಿಸಿ ಅವರುಗಳಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಇವರುಗಳ ಬಗ್ಗೆ ಸೂಕ್ತ ನಿಗಾವಹಿಸುವಂತೆ ರೆವಿನ್ಯೂ ಇನ್ಸ್‍ಪೆಕ್ಟರ್‍ಗಳು, ಗ್ರಾಮ ಲೆಕ್ಕಿಗರು, ಸಹಾಯಕ ಗ್ರಾಮ ಲೆಕ್ಕಿಗರು, ನಿಯೋಜಿತ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಡಗಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಸಮಯದಲ್ಲಿಯೇ ಕೇರಳದಿಂದ ಅನೇಕ ಮಂದಿ ದ್ವಿಚಕ್ರ ವಾಹನ ಹಾಗೂ ಗೇಟ್‍ನಿಂದ ನುಸುಳಿ ಬರುತ್ತಿರುವುದನ್ನು ತಡೆಗಟ್ಟಲು ಎಲ್ಲ ಗೇಟ್‍ಗಳಲ್ಲಿ ಪೊಲೀಸ್ ಬಂದೋಬಸ್ತ್‍ನ್ನು ಬಿಗಿಗೊಳಿಸಿರುವು ದಾಗಿ ತಹಶೀಲ್ದಾರ್ ನಂದೀಶ್ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ನಿನ್ನೆ ಹಾಗೂ ಇಂದು ಒಟ್ಟು 30ಮಂದಿಗೆ ಜ್ವರದ ತಪಾಸಣೆ ನಡೆಸಲಾಯಿತು. ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಬಂದು ಮನೆಯಲ್ಲಿದ್ದವರು ಇಂದು ಆಸ್ಪತ್ರೆಯಲ್ಲಿ ವಿದೇಶದಿಂದ ಬಂದ ಕುರಿತು ಸ್ವಯಂ ಘೋಷಣೆ ಮಾಡಿಕೊಂಡಿದ್ದರಿಂದ ಆಸ್ಪತ್ರೆಯಲ್ಲಿ ವಿದೇಶದಿಂದ ಸ್ವದೇಶಕ್ಕೆ ಬಂದ ಸ್ವಯಂ ಘೋಷಿತರ ಸಂಖ್ಯೆ 40ಕ್ಕೆ ಏರಿದೆ. ಎಲ್ಲರೂ ಮೊದಲ 14 ದಿನಗಳು ನಿಗಾ ಘಟಕದಲ್ಲಿರುವಂತೆ ಸೂಚಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ತಿಳಿಸಿದರು.

ನಿರ್ಗತಿಕರಿಗೆ ಪಟ್ಟಣ ಪಂಚಾಯಿತಿ ಯಿಂದ ಆಹಾರದ ವ್ಯವಸ್ಥೆ

ವೀರಾಜಪೇಟೆ ಪಟ್ಟಣದ ಖಾಸಗಿ ಹಾಗೂ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣ, ತಾಲೂಕು ಮೈದಾನ ಸೇರಿದಂತೆ ಪಟ್ಟಣದ ವಿವಿಧೆಡೆ ಗಳಲ್ಲಿರುವ ಭಿಕ್ಷುಕರು, ನಿರ್ಗತಿಕರು. ನಿಸ್ಸಾಹಾಯಕರು, ಅಲೆಮಾರಿಗಳಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇವರು ತಂಗಿದ್ದಲ್ಲಿಗೆ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಪಟ್ಟಣ ಪಂಚಾಯಿತಿಯ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದರು.

ಪೊನ್ನಂಪೇಟೆ: ಇಲ್ಲಿನ ಪೌರ ಕಾರ್ಮಿಕರು ಕೊರೊನಾ ಕಟ್ಟೆಚ್ಚರದ ನಡುವೆಯೂ ಕರ್ತವ್ಯದಲ್ಲಿ ತೊಡಗಿಕೊಂಡು ಪೊನ್ನಂಪೇಟೆಯ ವಿವಿಧ ಬಡಾವಣೆಯ ರಸ್ತೆಗಳಲ್ಲಿ ಶೇಖರಣೆಯಾಗಿದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು.

ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಿಂದ ಪೆಟ್ರೋಲ್, ಡೀಸೆಲ್ ಖರೀದಿಗೆ ಹೆಚ್ಚಿನ ಗ್ರಾಹಕರು ಆಗಮಿಸಿದ್ದರು. ಕಾಫಿ ಬೆಳೆಗಾರರು ತೋಟಗಳಿಗೆ ನೀರು ಹಾಯಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಡೀಸೆಲ್ ಖರೀದಿ ಮಾಡಿದರು. ಕೆಲವರು 400 ರಿಂದ 500 ಲೀಟರ್ ಡೀಸೆಲ್ ಖರೀದಿಸುವ ಮೂಲಕ ಪೆಟ್ರೋಲ್ ಬಂಕ್‍ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.