*ಸಿದ್ದಾಪುರ, ಮಾ. 28: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ನಿಗಾವಹಿಸಿದೆ. ಈ ನಡುವೆ ದುಬೈ ಭಾಗದಲ್ಲಿ ಹೆಚ್ಚಾಗಿ ವೃತ್ತಿಯಲ್ಲಿ ತೊಡಗಿರುವ ನೆಲ್ಲಿಹುದಿಕೇರಿ ನಿವಾಸಿಗಳ ಮೇಲೂ ಅಧಿಕಾರಿಗಳು ಕಣ್ಗಾವಲು ಇರಿಸಿದ್ದಾರೆ.
ತಾ. 17 ಮತ್ತು 18 ರಂದು ಸುಮಾರು ಏಳು ಮಂದಿ ದುಬೈನಿಂದ ನೆಲ್ಲಿಹುದಿಕೇರಿಗೆ ಮರಳಿದ್ದು, ಅಧಿಕಾರಿಗಳ ಸೂಚನೆಯಂತೆ ತಮ್ಮ ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಈ ಏಳು ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಕಾಳಜಿಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ನೆಲ್ಲಿಹುದಿಕೇರಿ ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕಿಯರು, ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಕ್ರಮ ಕೈಗೊಂಡಿದ್ದಾರೆ. ಏಳು ಮಂದಿಯ ಕೈಗಳಿಗೂ ವಿದೇಶದಿಂದ ಬಂದವರು ಮತ್ತು ನಿಗಾದಲ್ಲಿರುವವರು ಎಂದು ಮೊಹರು ಹಾಕಲಾಗಿದೆ. ಪೊಲೀಸರು ಕೂಡ ಗ್ರಾಮಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಕಫ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಪ್ರಯೋಗಾಲಯದ ಮಾಹಿತಿಗಾಗಿ ಎದುರು ನೋಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನಿಂದ ಆಗಮಿಸಿರುವ ತ್ಯಾಗತ್ತೂರು ಗ್ರಾಮದ ಆರು ಮಂದಿ ಯುವಕರನ್ನು ಪಂಚಾಯಿತಿ ಸದಸ್ಯ ಸಲೀಂ ಅವರು ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಕರೆತಂದು ಶೀತ, ಜ್ವರ ಇದೆಯೇ ಎಂದು ಪರೀಕ್ಷೆಗೆ ಒಳಪಡಿಸಿ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮನೆಯಲ್ಲೇ ಉಳಿಯುವಂತೆ ಸಲಹೆ ನೀಡಿದ್ದಾರೆ.
- ಸುಧಿ