ಸುಂಟಿಕೊಪ್ಪ, ಮಾ. 28: ಖಾಸಗಿ ಕ್ಲಿನಿಕ್‍ವೊಂದರ ಹಿರಿಯ ವೈದ್ಯರೊಬ್ಬರಿಗೆ ಸ್ಥಳೀಯ ಮರ ವ್ಯಾಪಾರಿಯೊಬ್ಬರೂ ತನ್ನ ತಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಅಶ್ಲೀಲ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಲು ಮುಂದಾದ ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ವರದಿಯಾಗಿದೆ.
ಗುರುವಾರ ಬೆಳಿಗ್ಗೆ 10.40ರ ಸುಮಾರಿನಲ್ಲಿ ಇಲ್ಲಿನ ಮರ ವ್ಯಾಪಾರಿ ಎ.ಬಿ. ಅಜೀಜ್ ಎಂಬವವರು ಶ್ರೀ ರಾಮ ಬಡಾವಣೆಯಲ್ಲಿರುವ ಡಾ. ಯಶೋಧರ ಪೂಜಾರಿ ಅವರ ಮನೆಗೆ ಬಂದು ತಮ್ಮ ತಾಯಿಗೆ ಹುಷಾರಿಲ್ಲ ತಾವು ಬಂದು ಚಿಕಿತ್ಸೆ ನೀಡಬೇಕು ಎಂದಿದ್ದಾರೆ. ಆದರೆ ಆ ವೈದ್ಯರು ಪ್ರಸ್ತುತ ಸ್ಥಿತಿಯಲ್ಲಿ ತಾನೂ ತನ್ನ ಮನೆಯಲ್ಲಾಗಲೀ, ಖಾಸಗಿ ಕ್ಲಿನಿಕ್‍ನಲ್ಲಾಗಲೀ, ಬೇರೆಯವರ ಮನೆಗೆ ತೆರಳಿ ಚಿಕಿತ್ಸೆ ನೀಡುವುದಿಲ್ಲ. ದಯವಿಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಎ.ಬಿ. ಅಜೀಜ್ ಅವರು ಅಶ್ಲೀಲ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದಲ್ಲದೇ, ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಈ ಘಟನೆ ಸಂಬಂಧ ವೈದ್ಯರಾದ ಡಾ. ಯಶೋಧರ ಪೂಜಾರಿ ಅವರು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.