ವೀರಾಜಪೇಟೆ, ಮಾ. 27: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಗಡಿ ಪ್ರದೇಶಕ್ಕೆ ಇಂದು ಸಂಜೆ ಎರಡು ರಾಜ್ಯಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕೂಟುಹೊಳೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಯ ಮಾರ್ಗದಿಂದಲೂ ಕೇರಳದಿಂದ ಯಾರೂ ಕರ್ನಾಟಕದ ಕೊಡಗಿಗೆ ನುಸುಳದಂತೆ ರಸ್ತೆಗೆ ಅಡ್ಡಲಾಗಿ ಜೆ.ಸಿ.ಬಿ ಯಂತ್ರದಿಂದ ನೆಲ ಮಟ್ಟದಿಂದ ಸುಮಾರು ಮೂರು ಅಡಿ ಎತ್ತರಕ್ಕೆ ಮಣ್ಣು ಹಾಕಿ ಬಂದ್ ಮಾಡಲಾಯಿತು.ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಅನುಸ ರಿಸುವ ಸಲುವಾಗಿ ಜಿಲ್ಲಾಡಳಿತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಕೇರಳದ ಕಣ್ಣಾನೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಅಂತರರಾಜ್ಯ ಹೆದ್ದಾರಿಯಲ್ಲಿ ಹಗಲು ರಾತ್ರಿ ಎನ್ನದೆ ದ್ವಿ ಚಕ್ರ ವಾಹನದವರು, ಕಾಲ್ನಡಿಗೆಯ ಪ್ರವಾಸಿಗರು ಗೊತ್ತು ಗುರಿ ಇಲ್ಲದೆ ಕೊಡಗನ್ನು ಪ್ರವೇಶಿಸುವುದನ್ನು ಈಗ ಪೂರ್ಣವಾಗಿ ನಿಷೇಧಿಸಿದಂತಾಗಿದೆ.

ಮಾಕುಟ್ಟ ಬಳಿಯ ಅಂತರರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮಣ್ಣು ಹಾಕಿ ಬಂದ್ ಮಾಡುವ ಸಂದರ್ಭದಲ್ಲಿ ಕೇರಳದ ಕಣ್ಣಾನೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಚಂದ್ರ,, ಮೈಸೂರು ದಕ್ಷಿಣ ವಲಯದ ಐ.ಜಿ. ವಿಪುಲ್ ಕುಮಾರ್, ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಡಾ: ಸುಮನ್ ಪನ್ನೇಕರ್, ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ಸ್ ಇತರ ತಾಲೂಕು ಅಧಿಕಾರಿಗಳು ಹಾಜರಿದ್ದರು. ಈ ಹಿಂದೆ ಮಾಕುಟ್ಟದಲ್ಲಿ ಗೇಟ್‍ನ್ನು ಬಂದ್ ಮಾಡಲಾಗಿತ್ತು.