ಗೋಣಿಕೊಪ್ಪಲು, ಮಾ.27: ದ.ಕೊಡಗಿನ ಕುಟ್ಟ ಮೂಲಕ ಕೇರಳ ರಾಜ್ಯದ ತೋಲ್ಪಟ್ಟಿಗೆ ಸಂಪರ್ಕ ಮಾಡುವ ಗಡಿಯನ್ನು (ಹಳೆ ಚೆಕ್ ಪೋಸ್ಟ್) ಸಂಪೂರ್ಣ ಬಂದ್ ಮಾಡಲಾಗಿದೆ.

ಕೇರಳದ ತೋಲ್ಪಟ್ಟಿಗೆ ಹೋಗುವ ರಾಜ್ಯ ಹೆದ್ದಾರಿಯನ್ನು ಜೆಸಿಬಿ ಸಹಾಯದಿಂದ ಮಣ್ಣನ್ನು ಹಾಕುವ ಮೂಲಕ ಬಂದ್ ಮಾಡಲಾಗಿದ್ದು ಕೇರಳ, ಕೊಡಗು ಹೆದ್ದಾರಿ ರಸ್ತೆ ಸಂಪೂರ್ಣ ಕಡಿತಗೊಳಿಸಲಾಗಿದೆ. ಕುಟ್ಟ ಸರ್ಕಲ್ ಇನ್ಷ್ ಪೆಕ್ಟರ್ ಪರಶಿವ ಮೂರ್ತಿ, ಕಂದಾಯ ಅಧಿಕಾರಿಗಳು ಶುಕ್ರವಾರ ಗಡಿ ಬಂದ್ ಮಾಡಿದ್ದು ಯಾವುದೇ ವಾಹನ ಸಂಚಾರ ಮಾಡದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ.

ಸಮೀಪದ ಕಾಲು ದಾರಿಯಲ್ಲಿ ಕೇರಳ ರಾಜ್ಯದ ಜನರು ತೋಲ್ಪಟ್ಟಿ ಯಿಂದ ಪೈತ್ ಎಸ್ಟೇಟ್ ಮೂಲಕ ನಡೆದುಕೊಂಡು ಕೊಡಗಿನ ಗಡಿ ಕುಟ್ಟ ದಾಟುತ್ತಿದ್ದ ಕಿರಿದಾದ ದಾರಿಯನ್ನು ಕೂಡ ತಂತಿ ಬೇಲಿಯಿಂದ ಮುಚ್ಚಿ ಸಂಪೂರ್ಣ ಬಂದ್ ಮಾಡಲಾಗಿದೆ.ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು; ಗಡಿಯ ಮೂಲಕ ಹೆಚ್ಚಾಗಿ ಜನರ ಓಡಾಟ ಹಾಗೂ ವಾಹನಗಳನ್ನು ನಿಯಂತ್ರಣ ಮಾಡುವ ಮೂಲಕ ಕೊರೊನಾ ವೈರಸ್ ತಡೆಗಟ್ಟಲು ಜಿಲ್ಲಾಡಳಿತ ಈ ದಿಟ್ಟ ನಿರ್ಧಾರಕ್ಕೆ ಬಂದಿದೆ. ಇದೀಗ ಕೊಡಗು - ಕೇರಳ ಗಡಿ ಸಂಪೂರ್ಣ ಬಂದ್ ನಿಂದಾಗಿ ಯಾವುದೇ ರೀತಿಯ ಸಂಚಾರ ವಿಲ್ಲದಂತಾಗಿದೆ.

- ಹೆಚ್.ಕೆ.ಜಗದೀಶ್