ಮಡಿಕೇರಿ, ಮಾ. 27 : ಕೊಡಗು ಜಿಲ್ಲೆಯಲ್ಲಿ ತಾ. 22 ರ ಮಧ್ಯ ರಾತ್ರಿಯಿಂದ ಏಪ್ರಿಲ್ 14 ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಾರ್ವಜನಿಕರು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಈ ಹಿಂದೆ ಸಮಯ ನಿಗದಿ ಗೊಳಿಸಲಾಗಿತ್ತು. ಜಿಲ್ಲೆಗೆ ಹೊಂದಿಕೊಂಡಂತೆ ಇರುವ ನೆರೆಯ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸಬೇಕಾದ ಕಾರಣ ಶುಕ್ರವಾರ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕರು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಸಮಯ ನಿಗದಿಪಡಿಸಲಾಗಿದೆ.ಬೆಳಿಗ್ಗೆ 6 ರಿಂದ 8 ಗಂಟೆ ವರೆಗೆ ಹಾಲು, ದಿನಪತ್ರಿಕೆಗಳನ್ನು ಮಾತ್ರ ಖರೀದಿಸಲು ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆ ತೆರೆಯಲು ವರ್ತಕರಿಗೆ ಸಮಯ ನಿಗದಿಪಡಿಸಿದೆ.

ವಾರದ 3 ದಿನಗಳಲ್ಲಿ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಆಹಾರ, ದಿನಸಿ, ತರಕಾರಿ, ಹಣ್ಣು-ಹಂಪಲುಗಳ ಖರೀದಿಗೆ ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆಯನ್ನು ತೆರೆಯಲು ವರ್ತಕರಿಗೆ ಸಮಯ ನಿಗದಿಪಡಿಸಿದೆ. ಎಲ್ಲಾ ರೀತಿಯ ಮೀನು ಮತ್ತು ಮಾಂಸದ ಮಾರಾಟವನ್ನು ನಿಷೇಧಿಸಿದೆ.

ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮಾತ್ರ ಆಗಮಿಸುವುದು. ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ 1 ಮೀಟರ್ ಅಂತರ ಕಾಯ್ದುಕೊಳ್ಳುವುದು. ಆಸ್ಪತ್ರೆ, ಕ್ಲಿನಿಕ್, ಫಾರ್ಮಸಿ, ಆಪ್ಟಿಕಲ್ ಸ್ಟೋರ್, ಡಯಾಗ್ನೋಸ್ಟಿಕ್ ಸೆಂಟರ್ ಒಳಗೊಂಡಂತೆ ಇತರ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಅಂಗಡಿ ಮಳಿಗೆಗಳು, ಗೋಡೌನ್, ಕಾರ್ಖಾನೆಗಳು ದಿನದ 24 ಗಂಟೆಗಳು ಕಾರ್ಯಾಚರಿಸಲು ವಿನಾಯಿತಿ ಇರುತ್ತದೆ.

ಮುಂದಿನ ಏಪ್ರಿಲ್ 14 ರ ವರೆಗೆ ದಿನದ 24 ಗಂಟೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ವಿನಾ ಕಾರಣ ತಿರುಗಾಡುವುದು, ಗುಂಪು ಗೂಡಬಾರದು. ಸಾರ್ವಜನಿಕ ಹಿತಾಸಕ್ತಿಯಿಂದ ಸಮಯ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.