ಪೆರಾಜೆ, ಮಾ. 27: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಹೊಂದಿಕೊಂಡಿರುವ ನೆರೆಯ ಕೇರಳರಾಜ್ಯದಿಂದ ಕೂರ್ನಡ್ಕ ಮಾರ್ಗದ ಮುಖಾಂತರ ಪೆರಾಜೆಗೆ ಸಂಪರ್ಕಿಸುವ ರಸ್ತೆ ಮತ್ತು ಕಮ್ಮಾಡಿಗಾಗಿ ಕರಟಡ್ಕ ಸಂಪರ್ಕಿಸುವ ರಸ್ತೆಗಳಿಗೆ ಅಳವಡಿಸಿರುವ ಗೇಟ್ ಭದ್ರತೆಯನ್ನು ಪರೀಕ್ಷಿಸಲಾಯಿತು

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯರಸ್ತೆಗಳನ್ನು ಸರ್ಕಾರದ ಆದೇಶದಂತೆ ಬಂದ್ ಮಾಡಿದ್ದು; ಅಲ್ಲಿನ ನಿವಾಸಿಗಳು ಕೆಲವು ಒಳರಸ್ತೆಯ ಮೂಲಕ ಬರಲಾರಂಭಿಸಿದರು. ಇದನ್ನು ತಿಳಿದ ಗ್ರಾಮಸ್ಥರು ಪಿಡಿಓಗೆ ಮನವಿ ಮಾಡಿ ಹೊರ ರಾಜ್ಯದಿಂದ ಪೆರಾಜೆಯ ಮುಖಾಂತರ ರಾಜ್ಯಕ್ಕೆ ಬರುತಿದ್ದ ರಸ್ತೆಯನ್ನು ಗ್ರಾಮಸ್ಥರ ಸಹಾಯದಿಂದ ಬಂದ್ ಮಾಡಿದರು.

ಆದರೆ ಕೆಲ ಕಿಡಿಗೇಡಿಗಳು ಬ್ಯಾರಿಕೇಡ್‍ಗಳನ್ನು ತೆಗೆದು ಒಳಪ್ರವೇಸಿದ ಬಗ್ಗೆ ವರದಿಯಾಗಿದ್ದು ಈ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಚಂದ್ರಶೇಖರ್, ಠಾಣೆಯ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಜಯಣ್ಣ ಅವರು ಪೆರಾಜೆ ಸಂಪರ್ಕದ ಅಂತರರಾಜ್ಯ ರಸ್ತೆಗಳನ್ನು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಗ್ರಾ.ಪಂ. ಸದಸ್ಯ ಉದಯಚಂದ್ರ ಕುಂಬಳಚೇರಿ, ಯುವಕೋಟೆ ಯುವಕಮಂಡಲದ ಗೌರವ ಅಧ್ಯಕ್ಷ ಶುಭಾಶ್ ಬಂಗಾರಕೋಡಿ ಇದ್ದರು.

-ವರದಿ: ಕಿರಣ್ ಕುಂಬಳಚೇರಿ