(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮಾ.27: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಸರಕಾರವು ಕೈಗೊಂಡ ಕಠಿಣ ಕ್ರಮದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಇಲ್ಲದೆÀ ಅನಾಹುತವೊಂದು ತಪ್ಪಿದಂತಾಗಿದೆ.

ಸದಾ ಮುಖ್ಯ ರಸ್ತೆಯ ಮೂಲಕ ಕಾರ್ಮಿಕರು ನಡೆದುಕೊಂಡೇ ಅಕ್ಕ ಪಕ್ಕದ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಾರ್ಮಿಕರು ಸೇರಿದಂತೆ ನಾಗರಿಕರು ರಸ್ತೆಯಲ್ಲಿ ಸಂಚಾರ ಮಾಡದ ಹಿನ್ನೆಲೆಯಲ್ಲಿ ಹಲವು ಕಾರ್ಮಿಕರ ಜೀವ ಉಳಿದಂತಾಗಿದೆ.

ಅಪಾಯದಲ್ಲಿದ್ದ 11ಸಾವಿರ ಕೆ.ವಿ.ವಿದ್ಯುತ್ ಲೈನ್‍ನ ಕಂಬಿ ಯೊಂದು ಮಧ್ಯರಾತ್ರಿ ಅಕಸ್ಮಾತ್ತಾಗಿ ತುಂಡಾಗಿ ರಸ್ತೆಗೆ ಬಿದ್ದಿದೆ. ದಾರಿಯಲ್ಲಿ ಯಾವುದೇ ವಾಹನ, ಜನ ಸಂಚಾರ ವಿಲ್ಲದ ಕಾರಣ ಮುಂದಾಗ ಬಹುದಾಗಿದ್ದ ದೊಡ್ಡದೊಂದು ಅಪಾಯ ತಪ್ಪಿದÀಂತಾಗಿದೆ.

ಲೈನ್ ಸಮೀಪದ ಮನೆಯವರು ಬೆಳಿಗ್ಗೆ ರಸ್ತೆ ಬದಿಯಲ್ಲಿ ಬಿದ್ದಿರುವ ವಿದ್ಯುತ್ ತಂತಿ ಗಮನಿಸಿ ಚೆಸ್ಕಾಂ ಇಲಾಖೆಯ ಇಂಜಿನಿಯರ್‍ಗೆ ಸುದ್ದಿ ಮುಟ್ಟಿಸಿದ್ದಾರೆ. 7 ಗಂಟೆಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿಸಿದಂತಾಗಿದೆ.

ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತೂರು-ಕುಟ್ಟ ಸಂಪರ್ಕದ ಮುಖ್ಯ ರಸ್ತೆಯ ಬದಿಯಲ್ಲಿ ಈ ಭಾಗದ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಸ್ಥಿರ ದೂರವಾಣಿ ಸಂಪರ್ಕವನ್ನು ನೀಡಲು ಬಿ.ಎಸ್.ಎನ್.ಎಲ್. ಸಂಸ್ಥೆಯು ಕೇಬಲ್ ಅಳವಡಿಸಿತ್ತು. ಇದರಿಂದ ಹಲವಾರು ಮನೆಗಳಿಗೆ ದೂರವಾಣಿ ಸಂಪರ್ಕ ಒದಗಿಸಲಾಗಿತ್ತು.

ಈ ಭಾಗದಲ್ಲಿ ಮತ್ತೊಂದು ನೆಟ್ವರ್ಕ್ ನೀಡುವ ಉದ್ದೇಶದಿಂದ ಖಾಸಗಿ ಕಂಪನಿಯು ಲೈನ್ ಎಳೆಯಲು ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿತ್ತು. ಈ ಕಂಬಗಳನ್ನು ಬಳಸಿಕೊಂಡ ಚೆಸ್ಕಾಂ ಇಲಾಖೆಯು 11 ಸಾವಿರ ಕೆ.ವಿ.ವಿದ್ಯುತ್ ಲೈನ್ ಅಳವಡಿಸಿತ್ತು. ಈ ಕೇಬಲ್ ಮೇಲೆಯೇ ವಿದ್ಯುತ್ ಕಂಬಗಳನ್ನು ನಿಲ್ಲಿಸಿದ್ದರು.!

11 ಕೆ.ವಿ.ವಿದ್ಯುತ್ ಲೈನ್ ಎಳೆದ ಬಗ್ಗೆ ಸ್ಥಳೀಯ ಗ್ರಾಮಸ್ಥ ಕಾಡ್ಯಮಾಡ ಮಧು ರವರು ಇಂತಹ ಅವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ವಿದ್ಯುತ್ ಲೈನ್ ಅಳವಡಿಸಿರುವುದು ಸರಿಯಲ್ಲ ಎಂದು ಚೆಸ್ಕಾಂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಮನವಿ ಮಾಡಿದ್ದರು.

ಈ ಸಂದರ್ಭ ಅಧಿಕಾರಿಗಳು ವಿದ್ಯುತ್ ಪೂರೈಕೆ ಮಾಡಲಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಕಳೆದ ಜೂನ್ 11 ರಂದು ಖಾಸಗಿ ಕಂಪನಿಯು ಚೆಸ್ಕಾಂ ಇಲಾಖೆಯ ಗಮನಕ್ಕೆ ಬಾರದೇ 11 ಕೆ.ವಿ.ಯ ವಿದ್ಯುತ್ ಲೈನ್‍ಗೆ ಸಂಪರ್ಕ ನೀಡಿದ್ದರು.

ಮುಂಜಾಗ್ರತೆ ಕ್ರಮವಾಗಿ ವಿದ್ಯುತ್ ತಂತಿ ಅಕಸ್ಮಾತ್ತಾಗಿ ತುಂಡಾಗಿ ಬಿದ್ದಲ್ಲಿ ರಸ್ತೆ ಅಡ್ಡಲಾಗಿ ಕಟ್ಟಬೇಕಾದ ಸುರಕ್ಷಿತ ತಂತಿಗಳನ್ನು ಕೂಡಾ ಕಟ್ಟಿರಲಿಲ್ಲ. ಈ ಬಗ್ಗೆ “ಶಕ್ತಿ” ಜೂನ್ 11 ರಂದು ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ಅಪಾಯಕಾರಿ ವಿದ್ಯುತ್ ಲೈನ್‍ಗೆ ಸುರಕ್ಷಿತ ಕಂಬಿ ಅಳವಡಿಸುವಂತೆ ವಿದ್ಯುತ್ ಇಲಾಖೆಯ ಗಮನ ಸೆಳೆಯಲಾಗಿತ್ತು. ಇದೀಗ ಚೆಸ್ಕಾಂ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.