ವೀರಾಜಪೇಟೆ, ಮಾ. 27: ವೀರಾಜಪೇಟೆಯಲ್ಲಿ ಲಾಕ್‍ಡೌನ್ ಅವಧಿಯನ್ನು ಬದಲಿಸಿ ನಿನ್ನೆಯಿಂದ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ ನಿರ್ಬಂಧದ ಸಡಿಲಿಕೆಯನ್ನು ವಿಸ್ತರಿಸಿದ್ದರಿಂದ ಇಂದು ಪಟ್ಟಣದ ಎಲ್ಲ ದಿನಸಿ ಅಂಗಡಿ ಹಾಗೂ ತರಕಾರಿ ಅಂಗಡಿಗಳಲ್ಲಿ ಖರೀದಿದಾರರ ಸಂಖ್ಯೆ ಕಡಿಮೆ ಇತ್ತು.

ಅಪರಾಹ್ನ 12 ಗಂಟೆಗೆ ಸರಿಯಾಗಿ ಪೊಲೀಸರು ಅಂಗಡಿ ಗಳಲ್ಲಿ ನಿಂತಿದ್ದ ಖರೀದಿದಾರರನ್ನು ಮನೆಗೆ ಕಳುಹಿಸುತ್ತಿದ್ದರು. ಮುಖ್ಯ ರಸ್ತೆಯಲ್ಲಿ ಜನ ಸಂಚಾರ ಕಡಿಮೆ ಇದ್ದುದರಿಂದ ಪೊಲೀಸರ ಬಂದೋ ಬಸ್ತ್ ಕೆಲಸಕ್ಕೂ ವಿರಾಮದಂತಿತ್ತು.

ರಾಜ್ಯದ ರಾಯಚೂರು, ಗದಗ್, ಯಾದಗಿರಿ, ಬಿಜಾಪುರದಿಂದ ಉದ್ಯೋಗ ಅರಸಿ ಕೇರಳದ ಕಣ್ಣಾನೂರು, ತಲಚೇರಿ, ಕೂತುಪರಂಬು ಸೇರಿದಂತೆ ವಿವಿಧ ಸ್ಥಳಗಳಿಗೆ ವಲಸೆ ತೆರಳಿದ್ದ ಸುಮಾರು 21 ಮಹಿಳೆಯರು ಸೇರಿದಂತೆ 133ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಮಾಕುಟ್ಟ ಮೂಲಕ ಇಂದು ಬೆಳಿಗ್ಗೆ ಪೆರುಂಬಾಡಿಗೆ ಬಂದಾಗ ತಾಲೂಕು ಆಡಳಿತ ಎಲ್ಲರನ್ನು ಥರ್ಮಲ್ ಸ್ಕ್ರೀನ್ ಹಾಗೂ ವಿವಿಧ ತಪಾಸಣೆಗೊಳಪಡಿಸಿತು.

ನಂತರ 133 ಮಂದಿಯನ್ನು ಎರಡು ಪಂಗಡಗಳಲ್ಲಿ ಬಾಳು ಗೋಡಿನ ಏಕಲವ್ಯ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಹೋಂ ಕ್ವಾರಂಟೇನ್‍ನಲ್ಲಿ ಇಡಲಾಗಿದೆ. ಎಲ್ಲರಿಗೂ ಅಡುಗೆ ಯವರಿಂದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇವರೆಲ್ಲರ ಸೂಕ್ತ ಪರೀಕ್ಷೆಯ ನಂತರ ಎಲ್ಲರನ್ನೂ ಅವರವರ ಊರಿಗೆ ಕಳುಹಿಸ ಲಾಗುವುದು ಎಂದು ತಾಲೂಕು ತಹಶೀಲ್ದಾರ್ ನಂದೀಶ್ ತಿಳಿಸಿದರು.

ಕೇರಳದ ರಾಜ್ಯದಲ್ಲಿಯೂ ನಿರಂತರವಾಗಿ ಲಾಕ್‍ಡೌನ್ ಇರುವುದರಿಂದ ಅಲ್ಲಿನ ಕಾಫಿ ತೋಟಗಳಲ್ಲಿ ಕರ್ನಾಟಕದಿಂದ ವಲಸೆ ಹೋದ ಕಾರ್ಮಿಕರಿಗೆ ಕೆಲಸವಿಲ್ಲದ್ದರಿಂದ ಕೊರೊನಾ ವೈರಸ್‍ನ ಮುಂಜಾಗೃತಾ ಕ್ರಮವಾಗಿ ಎಲ್ಲ ಕಾರ್ಮಿಕರು ಕೇರಳದಿಂದ ನಡೆದುಕೊಂಡು ಕರ್ನಾಟಕವನ್ನು ತಲುಪಿದ್ದಾರೆ. ಕೊಂಡಂಗೇರಿ ಬಫರ್ ಜೋನ್‍ನಲ್ಲಿರುವ 700 ಮಂದಿ ಹಾಗೂ ಹೋಂ ಕ್ವಾರಂಟೇನ್ ನಲ್ಲಿರುವ 75 ಕುಟುಂಬಗಳಿಗೆ ನಿನ್ನೆ ಎರಡನೇ ಬಾರಿಗೆ ಅಗತ್ಯ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಕೊರೊನಾ ವೈರಸ್ ಬಗ್ಗೆ ಎಲ್ಲರ ಮೇಲೆ ನಿಗಾ ಇಡಲಾಗಿದೆ. ಇದಕ್ಕಾಗಿ ಕಂದಾಯ ಅಧಿಕಾರಿಗಳು, ಗ್ರಾಮ ಸೇವಕರು, ಆಯ್ದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಕೊಂಡಗೇರಿ ಬಳಿಯ ಕೆಲವು ಅಂತರದಲ್ಲಿ ಶಿಬಿರ ಹೂಡಿದ್ದಾರೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.