ಸೋಮವಾರಪೇಟೆ, ಮಾ.27: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಇಂದು ಬೆಳಿಗ್ಗೆ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿಗಳ ಉಸ್ತುವಾರಿಯಲ್ಲಿ ಸಾರ್ವಜನಿಕರು ತರಕಾರಿ ಮತ್ತು ದಿನಸಿ ವಸ್ತುಗಳನ್ನು ಖರೀದಿಸಿದರು.

ಯಾವ ಅಂಗಡಿಯ ಎದುರೂ ಸಹ ಗುಂಪುಗೂಡದಂತೆ ಪೊಲೀಸ್ ಜೀಪ್‍ನ ಮೈಕ್‍ನಲ್ಲಿ ಸೂಚನೆ ನೀಡುತ್ತಾ ಠಾಣಾಧಿಕಾರಿ ಶಿವಶಂಕರ್ ಅವರು ಪಟ್ಟಣದಲ್ಲಿ ಗಸ್ತುಹಾಕಿದರು. ಇದರೊಂದಿಗೆ ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿಗಳು ಕೈಯಲ್ಲಿ ಲಾಠಿ ಹಿಡಿದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು. ಸುಖಾಸುಮ್ಮನೆ ಅಲೆಯುತ್ತಿದ್ದ ಮಂದಿಯನ್ನು ಗದರಿಸಿ ಮನೆಗಳಿಗೆ ವಾಪಸ್ ಕಳುಹಿಸಿದರು.

ಕಳೆದೆರಡು ದಿನಗಳಿಗೆ ಹೋಲಿಸಿದರೆ ಇಂದು ಪಟ್ಟಣದಲ್ಲಿ ಜನಸಂಖ್ಯೆ ಅಷ್ಟಾಗಿ ಕಂಡುಬರಲಿಲ್ಲ. ಮೊನ್ನೆ ಹಾಗೂ ನಿನ್ನೆ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಮಂದಿ ಸದ್ಯಕ್ಕೆ ಸಾಕಾಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿಸಿ ಹಿಂತೆರಳಿದ್ದರಿಂದ ಇಂದು ಜನದಟ್ಟಣೆ ಕಡಿಮೆಯಾಗಿತ್ತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿಯೇ ಸಂತೆ ತೆರೆದೆಕೊಂಡಿತ್ತು. ಕೆಲ ವರ್ತಕರು ತರಕಾರಿಗಳನ್ನು ತಮ್ಮ ವಾಹನದಿಂದಲೇ ಮಾರಾಟ ಮಾಡಿದರು. ಬೆಳಿಗ್ಗೆ ಪತ್ರಿಕೆ, ಹಾಲು ಖರೀದಿ ಜೋರಾಗಿತ್ತು. ಎಲ್ಲೂ ಸಹ ಗುಂಪುಗೂಡದಂತೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಜಾಗ್ರತೆ ವಹಿಸಿದ್ದರು.

ಗ್ರಾಮಗಳಿಗೆ ದಿಗ್ಬಂಧನ: ಕೊರೊನಾ ಸೋಂಕು ಹಿನ್ನೆಲೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸ್ಥಳೀಯರು ಸ್ವಯಂ ನಿರ್ಬಂಧ ವಿಧಿಸಿಕೊಂಡರು. ತಾಲೂಕಿನ ಮಸಗೋಡು, ಕಿಬ್ಬೆಟ್ಟ, ಕುಸುಬೂರು, ಚೌಡ್ಲು- ಕಲ್ಲಾರೆ, ಕರ್ಕಳ್ಳಿ, ಬಳಗುಂದ ಗ್ರಾಮಸ್ಥರು ಹೊರಭಾಗದಿಂದ ತಮ್ಮ ಗ್ರಾಮಗಳಿಗೆ ಯಾರೂ ಬರಬಾರದು ಎಂಬ ನಿಟ್ಟಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ, ಕಲ್ಲು, ತಂತಿಬೇಲಿ ನಿರ್ಮಿಸಿ ಸ್ವಯಂ ನಿರ್ಬಂಧ ವಿಧಿಸಿದರು.

ಕೋವಿಡ್ ಕೇರ್ ಸೆಂಟರ್: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 14 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕುಶಾಲನಗರದ ಕೆಲವು ಲಾಡ್ಜ್, ಹೊಟೇಲ್, ರೆಸಾರ್ಟ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗೆ ಬಳಸಿಕೊಳ್ಳಲು ಕೊಠಡಿಗಳನ್ನು ಕಾಯ್ದಿರಿಸಲು ಸಂಬಂಧಿಸಿದ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

ಈಗಾಗಲೇ ಕುಶಾಲನಗರ ವ್ಯಾಪ್ತಿಯಲ್ಲಿ ತಹಶೀಲ್ದಾರ್ ಗೋವಿಂದರಾಜು ಹಾಗೂ ನೋಡಲ್ ಅಧಿಕಾರಿಯಾಗಿರುವ ಎಡಿಎಲ್‍ಆರ್ ವಿರೂಪಾಕ್ಷ ಅವರುಗಳು ರೆಸಾರ್ಟ್‍ಗಳ ಮಾಲೀಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅಗತ್ಯ ಸಮಯದಲ್ಲಿ ಕೇರ್ ಸೆಂಟರ್ ತೆರೆಯಲು ಕೊಠಡಿಯನ್ನು ನೀಡುವಂತೆ ಮನವಿ ಮಾಡಿದರು.

ಇದರಂತೆ ಪರ್ಪಲ್ ಫಾರ್ಮ್, ಅಮನವನ ರೆಸಾರ್ಟ್, ಎಕ್ಸಲೆನ್ಸಿ, ಅತಿಥಿ, ಟಾಪ್ ಇನ್ ಟೌನ್, ನಕ್ಷತ್ರ, ಕನ್ನಿಕಾ ಇಂಟರ್‍ನ್ಯಾಷನಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಗತ್ಯಬಿದ್ದರೆ ಕೇರ್‍ಸೆಂಟರ್ ತೆರೆಯಲು ಕ್ರಮವಹಿಸಲಾಗುವದು. ಪ್ರತಿ ಸೆಂಟರ್‍ನಲ್ಲಿ ವೈದ್ಯರು, ಶುಶ್ರೂಷಕಿಯರು ಕರ್ತವ್ಯ ನಿರ್ವಹಿಸಲಿದ್ದು, ಬೆಡ್‍ಶೀಟ್, ಅಗತ್ಯ ಔಷಧಿಗಳನ್ನು ಒದಗಿಸಲು ಕ್ರಮ ವಹಿಸಲಾಗುವದು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಇದರೊಂದಿಗೆ ತಾಲೂಕಿನ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಕೊಡ್ಲಿಪೇಟೆ ಮತ್ತು ಶಾಂತಳ್ಳಿಯಲ್ಲಿ ತಲಾ 8 ಬೆಡ್‍ಗಳುಳ್ಳ ವಾರ್ಡ್ ಮೀಸಲಿರಿಸಲಾಗಿದೆ. ಅಗತ್ಯ ಬಿದ್ದರೆ ಸೋಮವಾರಪೇಟೆ ಪಟ್ಟಣ ಸುತ್ತಮುತ್ತಲ ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳನ್ನೂ ಸಹ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

ಮೊಟ್ಟೆ ಖಾಲಿ: ಪಟ್ಟಣದ ಬಹುತೇಕ ಅಂಗಡಿಗಳಲ್ಲಿ ಕೋಳಿಮೊಟ್ಟೆ ಖಾಲಿಯಾಗಿತ್ತು. ಲಾಕ್‍ಡೌನ್ ಹಿನ್ನೆಲೆ ಕೋಳಿ, ಹಂದಿ, ಕುರಿ ಮಾಂಸ ಮಾರಾಟ ಮಳಿಗೆಗಳು ಮುಚ್ಚಿರುವದು, ಹೊರಭಾಗದಿಂದ ಹಸಿ ಮೀನು ಸಾಗಾಟ ಸ್ಥಗಿತಗೊಂಡಿರುವ ಹಿನ್ನೆಲೆ ಒಣಮೀನಿಗೆ ಭಾರೀ ಬೇಡಿಕೆ ಇತ್ತು. ಈ ಮಧ್ಯೆ ಮೊಟ್ಟೆ ಖರೀದಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಿದ್ದರೂ ಸಹ ವರ್ತಕರಿಗೇ ಪೂರೈಕೆ ಇಲ್ಲದ್ದರಿಂದ ಗ್ರಾಹಕರು ಬರಿಗೈಯಲ್ಲಿ ಹಿಂತಿರುಗುವಂತಾಯಿತು.

ಪ.ಪಂ.ನಿಂದ ನೆರವು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿರ್ಗತಿಕರು, ಭಿಕ್ಷುಕರಿಗೆ ಪಟ್ಟಣ ಪಂಚಾಯಿತಿಯಿಂದ ಆಹಾರದ ನೆರವು ಒದಗಿಸಲಾಯಿತು. ಮನೆ ಮಠ ಇಲ್ಲದೇ ಪಟ್ಟಣದಲ್ಲಿ ಕೂಲಿ ಮಾಡಿಕೊಂಡು, ಮಾರ್ಕೆಟ್‍ನಲ್ಲೇ ಜೀವನ ಸಾಗಿಸುತ್ತಿದ್ದ ಮಂದಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಅವರುಗಳ ನೇತೃತ್ವದಲ್ಲಿ ಊಟ ಒದಗಿಸಲಾಯಿತು.

ಶಾಂತಳ್ಳಿಯಲ್ಲಿ ತಡೆ: ದೂರದ ಸುರತ್ಕಲ್‍ನಿಂದ ಸುಬ್ರಮಣ್ಯ, ಪಟ್ಲ ಮಾರ್ಗವಾಗಿ ಸೋಮವಾರಪೇಟೆಯ ಗಡಿ ಕುಂದಳ್ಳಿ ಗ್ರಾಮದ ಮೂಲಕ ಶಾಂತಳ್ಳಿಗೆ ಬೈಕ್‍ನಲ್ಲಿ ಆಗಮಿಸಿದ ಯುವಕನೋರ್ವನಿಗೆ ಸ್ಥಳೀಯರು ತಡೆಯೊಡ್ಡಿದರು. ಈಗಾಗಲೇ ಹೊರಭಾಗದಿಂದ ಜಿಲ್ಲೆಗೆ ಆಗಮಿಸಲು ನಿರ್ಬಂಧ ಇದ್ದರೂ ಕೂಡ ದೂರದ ಸುರತ್ಕಲ್‍ನಿಂದ ಶಾಂತಳ್ಳಿಗೆ ಆಗಮಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು, ಯುವಕನನ್ನು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

‘ಚೆಕ್ ಪೋಸ್ಟ್ ಗಡಿಯಲ್ಲಿ ಪೊಲೀಸರೇ ಒಳ ಬಿಟ್ಟಿದ್ದಾರೆ; ನಿಮ್ಮದೇನ್ರಿ ಇಲ್ಲಿ?’ ಎಂದು ಪ್ರಶ್ನಿಸಿದ ಸಂದರ್ಭ ಸ್ಥಳೀಯರು ಆಕ್ರೋಶಿತರಾದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಗ್ರಾಮದ ಪ್ರಮುಖರು ಪರಿಸ್ಥಿತಿಯನ್ನು ತಿಳಿಗೊಳಿಸಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಮಾಹಿತಿ ಒದಗಿಸಿದರು. - ವಿಜಯ್ ಹಾನಗಲ್